ಮಹಿಳೆಯರ ಮೇಲೆ ಹೆಚ್ಚಿದ ದಬ್ಬಾಳಿಕೆ

ಭಾನುವಾರ, ಮಾರ್ಚ್ 24, 2019
33 °C
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಳವಳ

ಮಹಿಳೆಯರ ಮೇಲೆ ಹೆಚ್ಚಿದ ದಬ್ಬಾಳಿಕೆ

Published:
Updated:
Prajavani

ಕೋಲಾರ: ‘ಸಮಾಜ ಬೆಳೆದಂತೆ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ಕಡಿಮೆಯಾಗಬೇಕು. ಆದರೆ, ಮಹಿಳೆಯರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ‘ಪುರುಷರ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹಿಳೆಯರ ಮೇಲಿನ ಶೋಷಣೆ ತಡೆಗಟ್ಟಬೇಕು’ ಎಂದು ಕಿವಿಮಾತು ಹೇಳಿದರು.

‘ಸಮಾಜದಲ್ಲಿನ ಮಹಿಳೆಯರ ಶಕ್ತಿ ಸಾಮರ್ಥ್ಯ ಮತ್ತು ಜವಾಬ್ದಾರಿ ಅರಿತು ಸರ್ಕಾರದ ಬಹುತೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡಲಾಗುತ್ತಿದೆ. ಸರ್ಕಾರ ಪುರುಷರಿಗೆ ನೀಡುವ ಸೌಲಭ್ಯಗಳು ಸದ್ಬಳಕೆಯಾಗುತ್ತಿಲ್ಲ. ಆದರೆ, ಮಹಿಳೆಯರು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಮಹಿಳೆಯರು ಯಾವುದೇ ಫಲಾಪೇಕ್ಷೆ ನಿರೀಕ್ಷಿಸುತ್ತಿಲ್ಲ. ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರು ಮಹಿಳಾ ಸಮುದಾಯಕ್ಕೆ ಮಾದರಿಯಾಗಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಸುಮಾರು 12 ಲಕ್ಷ ಮತದಾರರ ನೋಂದಣಿಗೆ ಸಹಕರಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸೇವಾನಿರತ ಕಿರಿಯ ಶುಶ್ರೂಷಕರಿಗೆ (ಎಎನ್‌ಎಂ) ಅಭಿನಂದನೆ. ಇವರ ಕಾರ್ಯತತ್ಪರತೆಯಿಂದ ಅಧಿಕಾರಿಗಳ ಕಾರ್ಯ ಒತ್ತಡ ಕಡಿಮೆಯಾಗಿದೆ’ ಎಂದರು.

ಆತ್ಮಾವಲೋಕನ ಮಾಡಿಕೊಳ್ಳಿ: ‘ಅಂಗನವಾಡಿ ನೌಕರರು ತಮ್ಮ ವ್ಯಾಪ್ತಿಯ ಮಹಿಳೆಯರು ಮತ್ತು ಮಕ್ಕಳಿಗೆ ಸೌಲಭ್ಯ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮಾತದಾನವಾದ ಸ್ಥಳಗಳಲ್ಲಿ ಮತದಾರರಿಗೆ ಅರಿವು ಮೂಡಿಸಬೇಕು. ಜತೆಗೆ ನೈತಿಕ ಮೌಲ್ಯ ತುಂಬುವ ಕೆಲಸವಾಗಬೇಕು. ಚುನಾವಣೆ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಇತಿಹಾಸ ಸೃಷ್ಟಿ: ‘ಮಹಿಳೆಯರು ಶತಮಾನಗಳಿಂದ ಇತಿಹಾಸ ಸೃಷ್ಟಿಸಿದ್ದಾರೆ. ಹೆಣ್ಣೆಂಬ ಕೀಳರಿಮೆ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಶ್ರಮ ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ಅಭಿಪ್ರಾಯಪಟ್ಟರು.

ಉತ್ತಮ ಸಾಧನೆ ಮಾಡಿದ ದಳಸನೂರು ಸ್ತ್ರೀಶಕ್ತಿ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧೂ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !