ಏಕತೆ– ಸಮಗ್ರತೆ ಕಾಪಾಡುವ ಸಂಕಲ್ಪ ಮಾಡಿ

7
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಕಿವಿಮಾತು

ಏಕತೆ– ಸಮಗ್ರತೆ ಕಾಪಾಡುವ ಸಂಕಲ್ಪ ಮಾಡಿ

Published:
Updated:
Deccan Herald

ಕೋಲಾರ: ‘ಪ್ರಜೆಗಳ ಜೀವನ ಶೈಲಿ ಬೇರೆ ಬೇರೆಯಿದ್ದರೂ ಭಾರತದ ಪವಿತ್ರ ಗ್ರಂಥವಾಗಿರುವ ಸಂವಿಧಾನದ ಆಶಯದಂತೆ ಏಕತೆ, ಸಮಗ್ರತೆ ಕಾಪಾಡುವ ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಕಿವಿಮಾತು ಹೇಳಿದರು.

ಇಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಅನೇಕ ಸಮಸ್ಯೆ ಎದುರಾಗಿದ್ದರೂ ಜನ ಎದೆಗುಂದದೆ ಆತ್ಮಸ್ಥೈರ್ಯದಿಂದ ಬದುಕು ಸಾಗಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಯು ಜಗತ್ತಿಗೆ ರೇಷ್ಮೆ, ಹಾಲು, ಚಿನ್ನ ನೀಡಿದೆ, ಸಾಹಿತ್ಯ ಕ್ಷೇತ್ರದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಡಿ.ವಿ.ಗುಂಡಪ್ಪ ಅನನ್ಯ ಕೊಡುಗೆ ನೀಡಿದ್ದಾರೆ. ವಿಶ್ವೇಶ್ವರಯ್ಯ ಅವರಂತಹ ಮಹನೀಯರ ಸಾಧನೆಯಿಂದ ಜಿಲ್ಲೆಯು ಜಾಗತಿಕವಾಗಿ ಗಮನ ಸೆಳೆದಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಜಿಲ್ಲೆಯ ಹೋರಾಟಗಾರರು ನಿರ್ಣಾಯಕ ಪಾತ್ರ ವಹಿಸಿದ್ದರು. ಕೆ.ಸಿ.ರೆಡ್ಡಿ, ಪಟ್ಟಾಭಿರಾಮನ್, ಎಂ.ವಿ.ಕೃಷ್ಣಪ್ಪ, ಬಿ.ಎಲ್.ನಾರಾಯಣಸ್ವಾಮಿ, ಟಿ.ಚನ್ನಯ್ಯ ಅವರ ಸೇವೆಯನ್ನು ಜನ ಸ್ಮರಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಿಲ್ಲೆಯ ಜನ ಬರ ಪರಿಸ್ಥಿತಿ ನಡುವೆಯೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಹಾಗೂ ಜಿಲ್ಲಾಡಳಿತದ ಪ್ರತಿನಿಧಿಯಾಗಿ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಘೋಷಿಸಿದರು.

ಇಸ್ರೇಲ್ ಮಾದರಿ ಕೃಷಿ: ‘ಕೃಷಿ ಇಲಾಖೆಯಿಂದ ರಾಜ್ಯದ 4 ಜಿಲ್ಲೆಗಳ 5 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಮತ್ತು ನೀರಾವರಿ ಅಳವಡಿಕೆಗೆ ₹ 150 ಕೋಟಿ ಮೀಸಲಿಡಲಾಗಿದೆ. ಇಸ್ರೇಲ್‌ ಮಾದರಿ ಕೃಷಿ ರೈತರಿಗೆ ತರಬೇತಿ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ, ರೇಷ್ಮೆಗೂಡು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಿಶ್ರ ತಳಿ ಗೂಡು ಕೆಜಿಗೆ ₹ 40 ಮತ್ತು ದ್ವಿತಳಿ ಗೂಡಿಗೆ ₹ 50 ಬೆಂಬಲ ಬೆಲೆ ಘೋಷಿಸಲಾಗಿದೆ. ಮಾವು ಹಣ್ಣಿಗೆ ಕೆಜಿಗೆ ₹ 2.50 ಸಹಾಯಧನ ನೀಡಲಾಗಿದೆ. ಹೈನೋದ್ಯಮ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿಗೆ ₹ 5 ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ವಾಸ್ತವಾಂಶ ಮನವರಿಕೆ: ‘ಜಿಲ್ಲೆಯನ್ನು ನಿರಂತರವಾಗಿ ಕಾಡುತ್ತಿರುವ ನೀರಿನ ಸಮಸ್ಯೆ ನೀಗಿಸಲು ₹ 1,400 ಕೋಟಿ ವೆಚ್ಚದಲ್ಲಿ ಕೆ.ಸಿ ವ್ಯಾಲಿ ಯೋಜನೆ ಕಾರ್ಯಗತಗೊಳಿಸಲಾಗಿದೆ. ಯೋಜನೆ ಸಂಬಂಧ ನೀರಾವರಿ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲೇರಿದ್ದು, ನೀರಿನ ಶುದ್ಧತೆ ಕುರಿತು ಸರ್ಕಾರವು ನ್ಯಾಯಾಲಯಕ್ಕೆ ವಾಸ್ತವಾಂಶ ಮನವರಿಕೆ ಮಾಡಿಕೊಡುತ್ತದೆ’ ಎಂದು ಹೇಳಿದರು.

‘ಯರಗೋಳ್ ಹಾಗೂ ಎತ್ತಿನಹೊಳೆ ಯೋಜನೆ ಮೂಲಕ ಜಿಲ್ಲೆಗೆ ನೀರು ಹರಿಸಲು ಸರ್ಕಾರ ಬದ್ಧವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಡಿಜಿಟಲ್ ನರ್ವ್ ಸೆಂಟರ್ ತೆರೆದಿದ್ದು, ಟಾಟಾ ಸಂಸ್ಥೆ ಸಹಭಾಗಿತ್ವದಲ್ಲಿ 4.70 ಲಕ್ಷ ಮಂದಿ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ. ಜಿಲ್ಲೆಯಲ್ಲಿ 6 ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲು ₹ 5.82 ಕೋಟಿ ಮಂಜೂರು ಮಾಡಲಾಗಿದೆ’ ಎಂದರು.

ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌, ಹೆಚ್ಚುವರಿ ಜಿಲ್ಲಾಧಿಕಾರಿ (ಪ್ರಭಾರ) ಶುಭಾ ಕಲ್ಯಾಣ್ ಪಾಲ್ಗೊಂಡಿದ್ದರು.

***

ಅಂಕಿ ಅಂಶ.....
* ಜಿಲ್ಲೆಯಲ್ಲಿ 12,422 ಕೃಷಿ ಹೊಂಡ ನಿರ್ಮಾಣ
* ₹ 3.26 ಕೋಟಿ ಸಹಾಯಧನ ಕೃಷಿ ಹೊಂಡಕ್ಕೆ
* 18 ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಸ್ಥಾಪನೆ
* 7,908 ರೈತರ ಅಲ್ಪಾವಧಿ ಕೃಷಿ ಸಾಲ ಮನ್ನಾ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !