ಶನಿವಾರ, ಜೂನ್ 19, 2021
23 °C
ಪೊಲೀಸ್‌ ಇಲಾಖೆಗೆ ತಟ್ಟಿದ ಕೋವಿಡ್‌ 2ನೇ ಅಲೆ ಬಿಸಿ

ಆರಕ್ಷಕರಿಗೆ ಸೋಂಕು: ಕರ್ತವ್ಯಕ್ಕೆ ಹಿಂದೇಟು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಗೂ ಕೋವಿಡ್‌ 2ನೇ ಅಲೆಯ ಬಿಸಿ ತಟ್ಟಲಾರಂಭಿಸಿದ್ದು, ಇಲಾಖೆಯ 97 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

3 ದಿನದ ಹಿಂದೆಯಷ್ಟೇ ಮೀಸಲು ಪೊಲೀಸ್‌ ಪಡೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಎಸ್‌ಐ ಶಾಮಿಲಿ ಅವರು ಕೋವಿಡ್‌ನಿಂದ ಜಿಲ್ಲೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ ಆದೇಶದ ಜಾರಿಗೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಇಲಾಖೆಯನ್ನು ಸೋಂಕು ಬೆಂಬಿಡದೆ ಕಾಡುತ್ತಿದೆ. ಕೋಲಾರ ಜಿಲ್ಲೆ ಮತ್ತು ಕೆಜಿಎಫ್‌ ಪೊಲೀಸ್‌ ಜಿಲ್ಲೆ ವ್ಯಾಪ್ತಿಯ ಸಿಬ್ಬಂದಿಗೆ ಸೋಂಕು ಹರಡಿದ್ದು, ಇತರೆ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ಯ ವ್ಯಾಪ್ತಿಯ ಕೋಲಾರ, ಮುಳಬಾಗಿಲು, ಮಾಲೂರು ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ 7 ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟಾರೆ 63 ಸಿಬ್ಬಂದಿಗೆ ಸೋಂಕು ಬಂದಿದೆ.

ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಒಬ್ಬರು ಬೆಂಗಳೂರಿನ ಅಪೋಲೊ ಆಸ್ಪತ್ರೆ ಹಾಗೂ ಇಬ್ಬರು ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಮತ್ತು ಇಟಿಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 60 ಮಂದಿ ಮನೆಗಳಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಕೆಜಿಎಫ್‌ ಪೊಲೀಸ್‌ ಜಿಲ್ಲೆ ವ್ಯಾಪ್ತಿಯ ಕೆಜಿಎಫ್‌ ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ 34 ಸಿಬ್ಬಂದಿಗೆ ಸೋಂಕು ತಗುಲಿದ್ದು, ಎಲ್ಲರೂ ತಮ್ಮ ಮನೆಗಳಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚಿದ ಕಾರ್ಯ ಒತ್ತಡ: ಕೊರೊನಾ ಸೋಂಕು ಇಲಾಖೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ದೈನಂದಿನ ಕಾರ್ಯ ಚಟುವಟಿಕೆಗೆ ಸಮಸ್ಯೆಯಾಗುತ್ತಿದೆ. ಸೋಂಕಿತರು ಚಿಕಿತ್ಸೆಗಾಗಿ ರಜೆ ಪಡೆದಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಿದ್ದು, ಹಾಲಿ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ.

ಮತ್ತೊಂದೆಡೆ ಸೋಂಕಿನ ಪ್ರಕರಣಗಳು ಹೆಚ್ಚಿರುವ ಕಂಟೈನ್‌ಮೆಂಟ್‌ ವಲಯಗಳಲ್ಲಿ ಸಿಬ್ಬಂದಿ ಕೋವಿಡ್‌ ಭಯದಿಂದಾಗಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.