ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಮಸ್ಯೆಗಳ ಸರಮಾಲೆ, ಬದುಕು ನಿತ್ಯ ನರಕ

ಬೀಡಿ ಕಾಲೊನಿ ನಿವಾಸಿಗಳ ಮೂಲಸೌಕರ್ಯದ ಕೂಗು ಅರಣ್ಯರೋದನ
Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಹನಿ ಹನಿ ನೀರಿಗೂ ತತ್ವಾರ...ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ.... ಚರಂಡಿ ತುಂಬಿ ರಸ್ತೆಗೆ ಹರಿದು ನಿಂತ ಕೊಳಚೆ ನೀರು...ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ...

ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ಬೀಡಿ ಕಾಲೊನಿ ಬಡಾವಣೆಯ ದುಸ್ಥಿತಿ. ಕುಡಿಯುವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಇಲ್ಲ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು.

ನಗರಸಭೆಯ 33ನೇ ವಾರ್ಡ್‌ ವ್ಯಾಪ್ತಿಯ ಈ ಬಡಾವಣೆಯಲ್ಲಿ ಸುಮಾರು 800 ಮನೆಗಳಿವೆ. ಜನಸಂಖ್ಯೆ 2 ಸಾವಿರದ ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಬಡಾವಣೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ನಗರಸಭೆ ಆಡಳಿತ ಯಂತ್ರವು ಬಡಾವಣೆಯ ಅಭಿವೃದ್ಧಿ ನಿರ್ಲಕ್ಷಿಸಿದ್ದು, ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ನಗರದ ಇತರೆ ಬಡಾವಣೆಗಳಂತೆಯೇ ಬೀಡಿ ಕಾಲೊನಿಯಲ್ಲಿ ನೀರಿನ ಸಮಸ್ಯೆಯಿದೆ. ಬಡಾವಣೆಯಲ್ಲಿ 4 ಕೊಳವೆ ಬಾವಿಗಳಿದ್ದು, ಈ ಪೈಕಿ ಎರಡರಲ್ಲಿ ಜೀವಸೆಲೆ ಬತ್ತಿದೆ. ಕೇವಲ 2 ಕೊಳವೆ ಬಾವಿಗಳಿಂದ ಇಡೀ ಬಡಾವಣೆಗೆ ನೀರು ಪೂರೈಸಲಾಗುತ್ತಿದೆ.

ಬಡಾವಣೆಯ ಬಹುಪಾಲು ಮನೆಗಳಲ್ಲಿ ನಲ್ಲಿ ಸಂಪರ್ಕವಿದೆ. ಆದರೆ, ಹಲವು ಮನೆಗಳ ನಲ್ಲಿಯಲ್ಲಿ ನೀರು ಬಂದು ವರ್ಷಗಳೇ ಕಳೆದಿವೆ. ವಾರಕ್ಕೊಮ್ಮೆ ನಲ್ಲಿ ನೀರು ಬಿಡಲಾಗುತ್ತಿದ್ದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಮಾತ್ರ ನೀರು ಸರಬರಾಜಾಗುತ್ತಿದೆ. ಕೆಲ ಮನೆಗಳ ಮಾಲೀಕರು ನಿಯಮಬಾಹಿರವಾಗಿ ನಲ್ಲಿಗೆ ನೇರವಾಗಿ ಮೋಟರ್‌ ಅಳವಡಿಸಿ ಹೆಚ್ಚಿನ ನೀರು ತಮ್ಮ ಮನೆಗೆ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಬಡಾವಣೆಯ ವಾಲ್‌ಮನ್‌ ಹಾಗೂ ನಗರಸಭೆ ಅಧಿಕಾರಿಗಳಿಗೆ ಈ ಸಂಗತಿ ಗೊತ್ತಿದ್ದರೂ ಅಕ್ರಮಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿಲ್ಲ. ನಲ್ಲಿಗೆ ಅನಧಿಕೃತವಾಗಿ ಮೋಟರ್ ಅಳವಡಿಸಿಕೊಂಡಿರುವ ಮನೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಿರುವ ಕಾರಣಕ್ಕೆ ನಗರಸಭೆ ವತಿಯಿಂದ ಆಗಾಗ್ಗೆ ಟ್ಯಾಂಕರ್‌ ಮೂಲಕ ಬಡಾವಣೆಗೆ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಆದರೆ, ಟ್ಯಾಂಕರ್‌ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಈ ಬಗ್ಗೆ ಸ್ಥಳೀಯರು ನಗರಸಭೆಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಜನರಿಗೆ ಬೇರೆ ದಾರಿ ಕಾಣದೆ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸುತ್ತಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗದ ಜನರೇ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವ ಪರಿಸ್ಥಿತಿಯಿದೆ. ಆರ್ಥಿಕವಾಗಿ ಸ್ಥಿತಿವಂತರಲ್ಲದವರು ತಳ್ಳು ಗಾಡಿ, ಸೈಕಲ್‌ಗಳಲ್ಲಿ ಮೂರ್ನಾಲ್ಕು ಕಿಲೋ ಮೀಟರ್‌ ದೂರದಿಂದ ನೀರು ತರುತ್ತಿದ್ದಾರೆ.

ರಸ್ತೆಗೆ ಚರಂಡಿ ನೀರು: ಬಡಾವಣೆಯ ಚರಂಡಿಗಳನ್ನು ವರ್ಷದಿಂದ ಸ್ವಚ್ಛಗೊಳಿಸಿಲ್ಲ. ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದೆಡೆ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಮಲಮೂತ್ರ ರಸ್ತೆಗೆ ಹರಿಯುತ್ತಿದೆ.

ಸಾಕಷ್ಟು ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ. ಕೆಲವೆಡೆ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳಗಳೇ ಇಲ್ಲ. ಮಕ್ಕಳು, ಜಾನುವಾರುಗಳು ಮ್ಯಾನ್‌ಹೋಲ್‌ನಲ್ಲಿ ಬೀಳುವ ಅಪಾಯವಿದೆ. ವಿವಿಧೆಡೆ ಮ್ಯಾನ್‌ಹೋಲ್‌ ಪೈಪ್‌ಗಳು ಒಡೆದಿದ್ದು, ಮನೆಗಳ ನಲ್ಲಿಯಲ್ಲಿ ಚರಂಡಿ ಹಾಗೂ ಮ್ಯಾನ್‌ಹೋಲ್‌ನ ಕೊಳಚೆ ನೀರು ಬರುತ್ತಿದೆ.

ಕತ್ತಲೆ ಭಾಗ್ಯ: ಬಡಾವಣೆಯಲ್ಲಿ ಬೀದಿ ದೀಪ ನಿರ್ವಹಣೆ ಪ್ರಕ್ರಿಯೆ ಹಳಿ ತಪ್ಪಿದ್ದು, ರಾತ್ರಿಯಾದರೆ ಮಹಿಳೆಯರು ಹಾಗೂ ವಯೋವೃದ್ಧರು ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಬೀದಿ ದೀಪಗಳು ಕೆಟ್ಟಿದ್ದು, ನಗರಸಭೆ ಅವುಗಳನ್ನು ರಿಪೇರಿ ಮಾಡಿಸಿಲ್ಲ. ಸಾಕಷ್ಟು ಕಡೆ ಬೀದಿ ದೀಪಗಳೇ ಇಲ್ಲ. ಕೆಟ್ಟಿರುವ ಬಲ್ಬ್‌ಗಳನ್ನು ಬದಲಿಸಿದ ಕಾರಣ ರಾತ್ರಿ ವೇಳೆ ವಯೋವೃದ್ಧರ ಹಾಗೂ ಮಹಿಳೆಯರ ಓಡಾಟಕ್ಕೆ ಸಮಸ್ಯೆಯಾಗಿದೆ.

ಕಳ್ಳರು ಈ ಪರಿಸ್ಥಿತಿಯ ಲಾಭ ಪಡೆದು ಬಡಾವಣೆಯಲ್ಲಿ ಅಪರಾಧದ ಕೈಚಳಕ ತೋರುತ್ತಿದ್ದಾರೆ. ಸರಗಳವು, ಕನ್ನಕಳವು ಪ್ರಕರಣಗಳು ಹೆಚ್ಚಿದ್ದು, ಸ್ಥಳೀಯರು ಭಯದಲ್ಲಿ ದಿನ ದೂಡುವಂತಾಗಿದೆ.

ಕೊಳೆಗೇರಿಯಾದ ಬಡಾವಣೆ: ಬಡಾವಣೆಯಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳ್ಳ ಹಿಡಿದಿದೆ. ನಗರಸಭೆ ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರಸ್ತೆಯ ಅಕ್ಕಪಕ್ಕ, ಚರಂಡಿಗಳ ಪಕ್ಕ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಿದ್ದಾರೆ. ಕಸವು ಚರಂಡಿ ಹಾಗೂ ರಸ್ತೆಗಳಿಗೆ ಹರಡಿಕೊಂಡಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ.

ಚರಂಡಿಗಳಲ್ಲಿ ಕಸ ತುಂಬಿಕೊಂಡು ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ರಸ್ತೆಗಳಲ್ಲಿ ಕಸ ಹರಡಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಖಾಲಿ ನಿವೇಶನಗಳಲ್ಲಿ ರಾಶಿಯಾಗಿರುವ ಬಿದ್ದಿರುವ ಕಸವನ್ನು ಪೌರ ಕಾರ್ಮಿಕರು ತೆರವುಗೊಳಿಸಿಲ್ಲ. ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ದಾರಿಹೋಕರು ಮೂಗಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿಯಿಂದ ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿ ಕಾಟ ಹೆಚ್ಚಿದೆ. ಕಸದ ರಾಶಿ ಬಳಿ ಬರುವ ಬೀದಿ ನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ. ಬೀದಿ ನಾಯಿ ದಾಳಿಯಿಂದಾಗಿ ಪೋಷಕರು ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಲು ಭಯಪಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT