ಭಾನುವಾರ, ನವೆಂಬರ್ 27, 2022
20 °C
ಗಣಿ ಕಾರ್ಮಿಕರಿಗೆ ಬಾಕಿ ಹಣ ವಿತರಿಸಲು ಆಗ್ರಹ

ಕಾರ್ಮಿಕರಿಗೆ ಅನ್ಯಾಯ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ‘ನ್ಯಾಯಾಲಯದ ಅನುಮತಿ ಪಡೆಯದೆ ಚಿನ್ನದ ಗಣಿಯ ಸೈನೈಡ್‌ ಗುಡ್ಡದ ಮಣ್ಣನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ಬಿಜಿಎಂಎಲ್ ಆಡಳಿತ ವರ್ಗ ಮಾಡುತ್ತಿದೆ’ ಎಂದು ಆರೋಪಿಸಿ ಬಿಜಿಎಂಎಲ್‌ ಮಾಜಿ ಕಾರ್ಮಿಕರ ಸಂಘದ ಕಾರ್ಯಕರ್ತರು ಬುಧವಾರ ಗಣಿಯ ಆಡಳಿತ ಕಚೇರಿ ಸ್ವರ್ಣಭವನದ ಮುಂಭಾಗದಲ್ಲಿ ಧರಣಿ ನಡೆಸಿದರು.

‘ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ಸವಲತ್ತು ನೀಡುವಂತೆ 2003ರಲ್ಲಿ ಹೈಕೋರ್ಟ್‌ ನೀಡಿದ ನಿರ್ದೇಶನವನ್ನು ಆಡಳಿತ ವರ್ಗ ಇದುವರೆಗೂ ಪಾಲಿಸಿಲ್ಲ. ಗಣಿ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣವನ್ನು ವಿತರಣೆ ಮಾಡಿಲ್ಲ. ಚಿನ್ನದ ಗಣಿಯ ಪುನರುಜ್ಜೀವನ ಮತ್ತು ಬಾಕಿ ಹಣದ ವಿಚಾರ ಇನ್ನೂ
ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಸೈನೈಡ್‌ ಗುಡ್ಡದ ಮಣ್ಣನ್ನು ಹರಾಜು ಹಾಕಲು ಸಲಹೆಗಾರನನ್ನು ನೇಮಕ ಮಾಡಲು ಗಣಿ ಆಡಳಿತ ವರ್ಗ ಮುಂದಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಆರ್.ಮೂರ್ತಿ ಆರೋಪಿಸಿದರು.

‘ಬಿಜಿಎಂಎಲ್‌ ಮುಚ್ಚುವ ಸಂದರ್ಭದಲ್ಲಿ ಬಿಐಎಫ್‌ಆರ್ ಪ್ರಕಾರ ರೋಗಗ್ರಸ್ಥ ಸರ್ಕಾರಿ ಉದ್ದಿಮೆಗಳ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ದೇಶದ ಬೇರೆಡೆ ರೋಗಗ್ರಸ್ತ ಉದ್ದಿಮೆಗಳ ಕಾರ್ಮಿಕರು ಸ್ವಯಂ ನಿವೃತ್ತಿ ತೆಗೆದುಕೊಂಡ ಸಂದರ್ಭದಲ್ಲಿ ನೀಡಿದ ಪರಿಹಾರಕ್ಕೂ ಬಿಜಿಎಂಎಲ್‌ನಿಂದ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೂ ಸಿಕ್ಕಿರುವ ಪರಿಹಾರದಲ್ಲಿ ವ್ಯತ್ಯಾಸವಿದೆ. ಇಲ್ಲಿನ ಕಾರ್ಮಿಕರ ಬವಣೆಯನ್ನು ಕೇಂದ್ರ ಸರ್ಕಾರದ ಮುಂದೆ ತರಲು ಸಮರ್ಥ ನಾಯಕರನ್ನು ನಾವು ಹೊಂದದೆ ಇರುವುದು ದೌರ್ಭಾಗ್ಯ’ ಎಂದರು.

‘ಚಿನ್ನದ ಗಣಿಯ ಕಾಲೋನಿಗಳಲ್ಲಿ 12 ಸಾವಿರ ಕಾರ್ಮಿಕರ ವಸತಿ ಗೃಹಗಳಿವೆ. ಅವುಗಳನ್ನೆಲ್ಲಾ ಕಾರ್ಮಿಕರೇ ಸ್ವಂತ ಖರ್ಚಿನಿಂದ ನಿರ್ಮಾಣ ಮಾಡಿಕೊಂಡಿದ್ದರು. ಆದರೆ ಆಡಳಿತ ವರ್ಗ ಗಣಿ ಮುಚ್ಚಿದ ಸಂದರ್ಭದಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡ 3,300 ಕಾರ್ಮಿಕರಿಗೆ ಮಾತ್ರ ಮನೆಗಳನ್ನು ಕೊಡುವುದಾಗಿ ಹೇಳಿದೆ. ಅಲ್ಲದೆ ಹೈಕೋರ್ಟ್‌ನಲ್ಲಿ ಈಗಾಗಲೇ ಮನೆಗಳನ್ನು ಕೊಟ್ಟಿದ್ದೇವೆ ಎಂದು ಪ್ರಮಾಣಪತ್ರವನ್ನು ಆಡಳಿತ ವರ್ಗ ಸಲ್ಲಿಸಿದೆ. ಆದರೆ
ಇದುವರೆಗೂ ಹಕ್ಕುಪತ್ರ ಕಾರ್ಮಿಕರಿಗೆ ನೀಡಿಲ್ಲ. ಕಾರ್ಮಿಕರು ಪ್ರತಿ ತಿಂಗಳು ಮನೆ ಬಾಡಿಗೆ ಕಟ್ಟುತ್ತಿದ್ದಾರೆ. ಆದರೆ ಬಾಡಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಕೇಳಿದರೆ ಗಣಿ ಅಧಿಕಾರಿಗಳ ಬಳಿ ಉತ್ತರವಿಲ್ಲ’
ಎಂದು ದೂರಿದರು.

ಸಂಘದ ಪ್ರಧಾನ ಕಾರ್ಯದರ್ಶಿ ವಿಜಯರಾಘವನ್‌ ಮಾತನಾಡಿ, ‘ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಹೊಂದಿದ್ದಾರೆ. ಅವರ ಕಾಲೋನಿಗಳಿಗೆ ಮೂಲ ಸೌಕರ್ಯ ಇಲ್ಲ. ದುಡ್ಡುಕೊಟ್ಟರೆ ಅಧಿಕಾರಿಗಳು ಬಿಜಿಎಂಎಲ್ ಜಾಗದಲ್ಲಿಯೇ ಅನಧಿಕೃತವಾಗಿ ಕಟ್ಟಡ ಕಟ್ಟಲು ಅನುಮತಿ ಕೊಡುತ್ತಾರೆ. ನಿಜವಾದ ಕಾರ್ಮಿಕರು ತಮ್ಮ ಮನೆಯನ್ನು ಸ್ವಲ್ಪ ದುರಸ್ತಿ ಮಾಡಿಕೊಳ್ಳಲು ಹೋದರೆ ತೊಂದರೆ ಕೊಡುತ್ತಾರೆ. ಕಾರ್ಮಿಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಸ್ವರ್ಣಭವನಕ್ಕೆ ಬಂದರೆ, ಭದ್ರತಾ ಸಿಬ್ಬಂದಿ ಒಳಗೆ ಬಿಡುವುದಿಲ್ಲ. ಆಡಳಿತ ವರ್ಗ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಈಗಾಗಲೇ ಗಣಿ ಕಾಲೋನಿಗಳಲ್ಲಿ ವಾಸ ಮಾಡುತ್ತಿರುವ ಎಲ್ಲಾ ಕಾರ್ಮಿಕರು ತಮ್ಮ ಮನೆಗಳಿಗೆ ಠೇವಣಿಯಾಗಿ ₹ 5,000 ಆಡಳಿತ ವರ್ಗಕ್ಕೆ ನೀಡಿದ್ದಾರೆ. ಕೂಡಲೇ ಮನೆಗಳ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ಸಿಪಿಐ ಮುಖಂಡ ಜ್ಯೋತಿಬಸು ಮಾತನಾಡಿ, ‘ಹೈಕೋರ್ಟ್‌ನ ತೀರ್ಪಿನಂತೆ ಕಾರ್ಮಿಕರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಕೂಡಲೇ ನೀಡಬೇಕು’ ಎಂದು
ಒತ್ತಾಯಿಸಿದರು.

ಮುಖಂಡ ಕೆ.ಸೇದು, ಜೋಸೆಫ‌ ಸೆಬಾಸ್ಟಿನ್‌, ಪನ್ನೀರ್‌ ಸೆಲ್ವಂ, ಅನ್ಬರಸನ್‌, ಗಣೇಶನ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು