ಶುಕ್ರವಾರ, ಜೂನ್ 5, 2020
27 °C
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಆಹಾರ, ವಾಣಿಜ್ಯ ಬೆಳೆಗಳಿಗೆ ಗಣನೀಯ ಹಾನಿ

ಶ್ರೀನಿವಾಸಪುರ | ರೈತರ ನಿದ್ದೆಗೆಡಿಸಿದ ಕೀಟಜಾಲ

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆಗಳಿಗೆ ಮಾರಕವಾದ ಕೀಟ ಪ್ರಭೇದವೊಂದು ಕಾಣಿಸಿಕೊಂಡಿದೆ. ನೋಡಲು ಆಕರ್ಷಕ ಕೆಂಪು, ಕಪ್ಪು ಹಾಗೂ ಬಿಳಿ ಬಣ್ಣಗಳಿಂದ ಕಂಗೊಳಿಸುವ ಈ ಕೀಟಗಳು ಹಿಂಡು ಹಿಂಡಾಗಿ ಕುಳಿತು ಎಲೆಗಳನ್ನು ಕಬಳಿಸುತ್ತಿವೆ.

ಈ ಕೀಟಗಳು ಕಾಡು ಬಳ್ಳಿಗಳ ಎಲೆಗಳ ಮೇಲೆ ಕುಳಿತು ರಸ ಹೀರುವ ದೃಶ್ಯ ರೈತರ ಆತಂಕಕ್ಕೆ ಕಾರಣವಾಗಿದೆ. ಅಸಂಖ್ಯಾತ ಕೀಟಗಳು ಒಟ್ಟಾಗಿ ಬೆಳೆಗಳ ಮೇಲೆ ದಾಳಿ ಮಾಡಿದರೆ ಗತಿಯೇನು ಎಂಬ ಭಯ ಅವರನ್ನು ಕಾಡುತ್ತಿದೆ.

‘ಕೀಟ ಪ್ರಪಂಚದಲ್ಲಿ ಡಿ.ಸಿಂಗ್ಯುಲೇಟಸ್ ಪ್ರಭೇದದಲ್ಲಿ, ಪೈರೊಕೋರಿಡ ಕುಟುಂಬಕ್ಕೆ ಸೇರಿದ ಈ ಕೀಟಗಳು ಆಹಾರ ಹಾಗೂ ವಾಣಿಜ್ಯ ಬೆಳೆಗಳಿಗೆ ಗಣನೀಯ ಪ್ರಮಾಣದಲ್ಲಿ ಹಾನಿಯನ್ನು ಉಂಟುಮಾಡುತ್ತವೆ’ ಎಂದು ಜೀವ ವಿಜ್ಞಾನ ಉಪನ್ಯಾಸಕಿ ಸಿ.ಚೈತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋಡಲು ಸುಂದರವಾಗಿ ಕಾಣುವ ಈ ಹೊಟ್ಟೆಬಾಕ ಕೀಟಗಳು ಆಹಾರ ಬೆಳೆಯಾದ ಜೋಳ, ಹಣ್ಣಿನ ಬೆಳೆಗಳಾದ ಕರಬೂಜ, ಕಿತ್ತಳೆ, ನಿಂಬೆ, ವಾಣಿಜ್ಯ ಬೆಳೆಗಳಾದ ಹತ್ತಿ, ಹಿಪ್ಪುನೇರಳೆ, ತೇಗ ಮುಂತಾದವು ಗಳನ್ನು ತಿಂದು ತೇಗುತ್ತವೆ. ಇದರಿಂದ ಸಹಜವಾಗಿಯೇ ಕೃಷಿಕರಿಗೆ ನಷ್ಟ ಉಂಟಾಗುತ್ತದೆ. ಇದನ್ನು ತಡೆಯಲು ಕೀಟನಾಶಕ ಸಿಂಪಡಣೆ ಮಾಡಲು ಅಧಿಕ ಹಣ ಖರ್ಚಾಗುತ್ತದೆ’ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಈ ಕೀಟಗಳಿಗಿಂತ ದಪ್ಪವಾಗಿರುವ ಕೀಟಗಳು ತೊಗರಿ ಬೆಳೆಯುವ ಕಾಲದಲ್ಲಿ ಕಂಡುಬರುತ್ತವೆ. ಅವುಗಳನ್ನು ಸ್ಥಳೀಯವಾಗಿ ‘ಜಿಡ್ಡುಹುಳು’ ಎಂದು ಕರೆಯುತ್ತಾರೆ. ಅವುಗಳನ್ನು ಮುಟ್ಟಿದಾಗ ಕೆಟ್ಟ ವಾಸನೆ ಬರುವುದರಿಂದ ಆ ಹೆಸರಿನಿಂದ ಕರೆಯುತ್ತಾರೆ. ಇವೂ ಸಹ ತರಕಾರಿ ಬೆಳೆಗಳನ್ನು ತಿಂದು ಹಾಳು ಮಾಡುತ್ತವೆ. ಇವುಗಳನ್ನು ಹಿಡಿದು ಗಡಿಗೆಯಲ್ಲಿ ತುಂಬಿ, ಆಳವಾದ ಗುಳಿಯಲ್ಲಿ ಸುರಿದು ಮಣ್ಣು ಮುಚ್ಚಲಾಗುತ್ತದೆ.

ಈಗ ಕಾಣಿಸಿಕೊಂಡಿರುವ ಈ ಕೀಟಗಳು, ಕೆಲವು ವರ್ಷಗಳ ಹಿಂದೆ ಜಂಬು ನೇರಳೆ ಮರಗಳಿಗೆ ಮಾರಕವಾಗಿ ಪರಿಣಮಿಸಿದ್ದವು. ಎಲೆಗಳನ್ನು ತಿಂದು ಹಾಳುಗೆಡವಿದ್ದವು. ಅದಾದ ನಂತರ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಕಾಡಿನ ಬಳ್ಳಿಗಳ ಮೇಲೆ ದಾಳಿ ಮಾಡುತ್ತಿವೆ. ರೈತರು ಯಾಮಾರಿದರೆ ತೊಟದ ಬೆಳೆಗಳ ಮೇಲೆ ದಾಳಿ ಮಾಡುವ ಅಪಾಯ ಇಲ್ಲದಿಲ್ಲ.

ಸುಂದರವಾಗಿ ಕಾಣುವ ಚಿಟ್ಟೆಗಳು ಮಾಡುವ ಬೆಳೆ ಹಾನಿ ಅಷ್ಟಿಷ್ಟಲ್ಲ. ಆದ್ದರಿಂದಲೇ ಚಿಟ್ಟೆಗಳನ್ನು ಸುಂದರ ಮುಖದ ವಿಶಕನ್ಯೆಯರು ಎಂದು ಕರೆಯುತ್ತಾರೆ. ಬೆಳೆಯ ಎಲೆಗಳ ಕೆಳಗೆ ಮೊಟ್ಟೆ ಇಟ್ಟು ಹುಳುಗಳನ್ನು ಉತ್ಪಾದಿಸುತ್ತವೆ. ಆ ಹುಳುಗಳು ಬೆಳೆಗಳನ್ನು ತಿಂದು ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟುಮಾಡುತ್ತವೆ. ಅದೇ ರೀತಿ ಈಗ ಹಗುರವಾಗಿ ಕಾಣುವ ಹಾಗೂ ರೂಪದಿಂದ ಕಣ್ಸೆಳೆವ ಕೀಟಗಳು ಬೆಳೆಗಳನ್ನು ಬಲಿ ಪಡೆಯಲು ಮುಂದಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು