ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೇನಿದ್ದರೂ ‘ಹಿಂದೆ ಸರಿಸುವ’ ಆಟ

ಉಮೇದುವಾರಿಕೆ ಸಲ್ಲಿಕೆ ಅಂತ್ಯ; ನಾಮಪತ್ರಗಳ ಪರಿಶೀಲನೆ ಇಂದು
Last Updated 25 ಏಪ್ರಿಲ್ 2018, 9:35 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಒಂಬತ್ತು ವಿಧಾನಸಭೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಂಡಿದೆ. ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಏ.25ರಂದು ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್‌ ಪಡೆಯಲು ಏ.27 ಕೊನೆಯ ದಿನವಾಗಿದೆ.

ಇಲ್ಲಿಯವರೆಗೆ ‘ಬಿ’ ಫಾರಂಗಳ ಬೆನ್ನು ಬಿದ್ದಿದ್ದ ಅಭ್ಯರ್ಥಿಗಳು ತಮಗೆ ತೊಡಕಾಗುವ ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ಯತ್ನದಲ್ಲಿ ತೊಡಗಿದ್ದಾರೆ.

ತಮ್ಮ ಮತಬುಟ್ಟಿಗೆ ಕೈ ಹಾಕುವವರ ನಾಮಪತ್ರಗಳನ್ನು ಅವರ ಮನವೊಲಿಸಿ ವಾಪಸು ಪಡೆಯುವಂತೆ ಮಾಡುವ ಹಾಗೂ ವಿರೋಧಿ ಅಭ್ಯರ್ಥಿಯ ಮತ ವಿಭಜನೆ ಮಾಡುವ ಸಾಮರ್ಥ್ಯ ಇರುವ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿಯೇ ಉಳಿಯುವಂತೆ ‘ನೋಡಿಕೊಳ್ಳುವ’ ಕೆಲಸಕ್ಕೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಮುಂದಾಗುವುದು ಸಾಮಾನ್ಯ ಸಂಗತಿ.

ಕಾಂಗ್ರೆಸ್‌ ಮತ್ತು ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿದ್ದರೆ, ಜೆಡಿಎಸ್‌ ಒಂಬತ್ತು ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಲಬುರ್ಗಿ ಗ್ರಾಮೀಣ ಮತ್ತು ಚಿತ್ತಾಪುರ ಕ್ಷೇತ್ರವನ್ನು ಮಿತ್ರಪಕ್ಷ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ)ಗೆ ಬಿಟ್ಟುಕೊಟ್ಟಿತ್ತು.

ಬಿಜೆಪಿ ಟಿಕೆಟ್‌ ವಂಚಿತ ರೇವೂ ನಾಯಕ ಬೆಳಮಗಿ ಕೊನೆ ಕ್ಷಣದಲ್ಲಿ ಜೆಡಿಎಸ್‌ ಸೇರ್ಪಡೆಯಾಗಿದ್ದರಿಂದ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಆ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಸೂರ್ಯಕಾಂತ ನಿಂಬಾಳಕರ ಅವರು ಕಲಬುರ್ಗಿ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಕಲಬುರ್ಗಿ ದಕ್ಷಿಣ ಕ್ಷೇತ್ರದಿಂದ ಜೆಡಿಎಸ್‌ನ ಬಸವರಾಜ ಡಿಗ್ಗಾವಿ ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರ ವಾಪಸು ಪಡೆದು ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಬಿಎಸ್‌ಪಿಯವರು ಜೆಡಿಎಸ್‌ ಸ್ಥಳೀಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

‘ಆದರೆ, ಈ ವಿಷಯವಾಗಿ ವಿನಾಕಾರಣ ಗೊಂದಲ ಉಂಟು ಮಾಡಲಾಗುತ್ತಿದ್ದು, ಡಿಗ್ಗಾವಿ ಅವರೇ ಇಲ್ಲಿ ಜೆಡಿಎಸ್‌ ಅಭ್ಯರ್ಥಿ. ಈ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿಲ್ಲ’ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಿದ್ದಾರೆ.

ಇನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ‘ಮುಹೂರ್ತಕ್ಕೆ ಒಮ್ಮೆ, ಜನರೊಟ್ಟಿಗೆ ಇನ್ನೊಮ್ಮೆ’ ಎಂಬ ನೀತಿಯಂತೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಈ ಎಲ್ಲ ನಾಮಪತ್ರಗಳ ಪರಿಶೀಲನೆ ಏ.25ರಂದು ಬುಧವಾರ ನಡೆಯಲಿದ್ದು, ಕ್ರಮಬದ್ಧವಾಗಿರುವ ನಾಮಪತ್ರಗಳ ಪಟ್ಟಿಯನ್ನು ಸಂಜೆಯ ವೇಳೆಗೆ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT