ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್– ಮೋಟರ್‌ ರಿಪೇರಿಗೆ ಒತ್ತಾಯ: ಧರಣಿ

Last Updated 14 ಆಗಸ್ಟ್ 2019, 11:17 IST
ಅಕ್ಷರ ಗಾತ್ರ

ಕೋಲಾರ: ನಗರದ 14 ವಾರ್ಡ್‌ ವ್ಯಾಪ್ತಿಯ ಕೊಳವೆ ಬಾವಿಗಳ ಪಂಪ್‌ ಮತ್ತು ಮೋಟರ್‌ ದುರಸ್ತಿ ಮಾಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಇಲ್ಲಿ ಮಂಗಳವಾರ ನಗರಸಭೆ ಎದುರು ಧರಣಿ ನಡೆಸಿದರು.

‘ವಾರ್ಡ್‌ ವ್ಯಾಪ್ತಿಯ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆಯಿಂದ ಸಮರ್ಪಕವಾಗಿ ಟ್ಯಾಂಕರ್‌ ನೀರು ಪೂರೈಸುತ್ತಿಲ್ಲ. ಬಡಾವಣೆ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಪಂಪ್‌ ಮೋಟರ್‌ ಕೆಟ್ಟಿರುವುದರಿಂದ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ವಾರ್ಡ್‌ ಸುಮಾರು 2 ಕಿ.ಮೀ ವಿಸ್ತಾರವಾಗಿದ್ದು, ಜನಸಂಖ್ಯೆ 5 ಸಾವಿರದ ಗಡಿ ದಾಟಿದೆ. ಜಯನಗರ, ಪಿ.ಸಿ ಬಡಾವಣೆ, ಚೌಡೇಶ್ವರಿ ನಗರ, ಪೇಟೆ ಚಾಮನಹಳ್ಳಿ ಬಡಾವಣೆಗಳು ವಾರ್ಡ್‌ನ ವ್ಯಾಪ್ತಿಯಲ್ಲಿವೆ. ಇಡೀ ವಾರ್ಡ್‌ಗೆ 13 ಕೊಳವೆ ಬಾವಿಗಳಿದ್ದು, ಈ ಪೈಕಿ 7ರಲ್ಲಿ ನೀರು ಲಭ್ಯವಿದೆ’ ಎಂದು 14ನೇ ವಾರ್ಡ್‌ನ ಮಾಜಿ ಸದಸ್ಯ ಎಸ್‌.ಆರ್‌.ಮುರಳಿಗೌಡ ಹೇಳಿದರು.

‘ನೀರು ಲಭ್ಯವಿರುವ 7 ಕೊಳವೆ ಬಾವಿಗಳ ಪೈಕಿ 3ರ ಪಂಪ್‌ ಮತ್ತು ಮೋಟರ್‌ ಕೆಟ್ಟು ಹಲವು ತಿಂಗಳಾಗಿದೆ. ಪಂಪ್‌ ಮತ್ತು ಮೋಟರ್‌ ದುರಸ್ತಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ವಾರ್ಡ್‌ನಲ್ಲಿ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಾದೇಶ ನೀಡುತ್ತಿಲ್ಲ: ‘ವಾರ್ಡ್‌ಗೆ ಹೊಸದಾಗಿ ಕೊಳವೆ ಬಾವಿ ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಅಧಿಕಾರಿಗಳು ಗುತ್ತಿಗೆದಾರನಿಗೆ ಕೊಳವೆ ಬಾವಿ ಕೊರೆಯಲು ಕಾರ್ಯಾದೇಶ ನೀಡುತ್ತಿಲ್ಲ. ವಾರ್ಡ್‌ನಲ್ಲಿ ಕೊಳವೆ ಬಾವಿ ಹಾಗೂ ಬೀದಿ ದೀಪಗಳ ನಿರ್ವಹಣೆ ಪ್ರಕ್ರಿಯೆ ಹಳಿ ತಪ್ಪಿದ್ದು, ಅಧಿಕಾರಿಗಳಿಗೆ ಜನರ ಕಷ್ಟದ ಅರಿವಿಲ್ಲ’ ಎಂದು ಧರಣಿನಿರತರು ದೂರಿದರು.

‘ನೀರು ಲಭ್ಯವಿರುವ ಕೊಳವೆ ಬಾವಿಗಳ ಪಂಪ್‌ ಮೋಟರ್‌ ರಿಪೇರಿ ಮಾಡಬೇಕು. ವಾರ್ಡ್‌ನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪ್ರಮಾಣದಲ್ಲಿ ಟ್ಯಾಂಕರ್ ನೀರು ಪೂರೈಸಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಕಚೇರಿಗೆ ಬೀಗ ಜಡಿದು ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ವಾರ್ಡ್‌ನ ನಿವಾಸಿಗಳಾದ ಹರೀಶ್‌, ಸತ್ಯಪ್ಪ, ಸಂದಪ್ಪ, ಪ್ರವೀಣ್‌, ಬೈಲಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT