ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಒತ್ತಾಯ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರು ಧರಣಿ
Last Updated 8 ನವೆಂಬರ್ 2019, 13:31 IST
ಅಕ್ಷರ ಗಾತ್ರ

ಕೋಲಾರ: ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ಪದಾರ್ಥ ಸರಬರಾಜು ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎದುರು ಶುಕ್ರವಾರ ಧರಣಿ ನಡೆಸಿ, ಇಲಾಖೆಯ ವ್ಯವಸ್ಥಾಪಕಿಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ದಾಖಲಾಗದಿದ್ದರು, ಕಾರ್ಯಕರ್ತರು ಹೆಚ್ಚುವರಿ ದಾಖಲಾತಿ ತೋರಿಸಿ ಆಹಾರ ಸರಬರಾಜು ಮಾಡಿಕೊಳ್ಳುತ್ತಿದ್ದು, ಮಕ್ಕಳಿಗೂ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಮಕ್ಕಳ ಸಂಖ್ಯೆಯ ಅನುಪಾತಕ್ಕಿಂತ ಹೆಚ್ಚು ಮಕ್ಕಳ ಸಂಖ್ಯೆಗೆ ನಕಲಿ ಬಿಲ್ ತಯಾರಿಸುತ್ತಾರೆ. ಅಂಗನವಾಡಿಗಳಿಗೆ ಆಹಾರ ಪದಾರ್ಥಗಳು ಸರಬರಾಜು ಅಗದಿದ್ದರು ಅಧಿಕಾರಿಗಳು ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಬಿಲ್ ಪಾವತಿ ಮಾಡುತ್ತಾರೆ. ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಮಾಜದಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡಲು ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಸರ್ಕಾರದಿಂದ ಸರಬರಾಜು ಅಗುವ ಆಹಾರವನ್ನು ಮಕ್ಕಳಿಗೆ ನೀಡದೆ ಕಾರ್ಯಕರ್ತರು, ಇಲಾಖೆಯ ಅಧಿಕಾರಿಗಳು ಮನೆಗಳಿಗೆ ಸಾಗಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಟೀಕಿಸಿದರು.

‘ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಆದ್ಯತೆ ಮೇರೆ ದುರಸ್ತಿಪಡಿಸಬೇಕು, ಇಲಾಖೆಯಿಂದ ದುರಸ್ತಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಬಳಕೆ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಮಕ್ಕಳನ್ನು ವಂಚಿಸಲಾಗುತ್ತಿದೆ’ ಎಂದು ಬೇಸರವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಎ.ನಳಿನಿ ಮಾತನಾಡಿ, ‘ಜಿಲ್ಲೆಯಲ್ಲಿನ ಕೆಲ ಅಂಗನವಾಡಿ ಕೇಂದ್ರಗಳನ್ನು ನೋಡಿದರೆ ಅಂತಕ ಎದುರಾಗುತ್ತದೆ. ಕಾರ್ಯರ್ತರು ಕೇಂದ್ರಗಳಿಗೆ ಬಾರದೆ ಸಹಾಯಕಿಯರಿಂದ ಮಕ್ಕಳಿಗೆ ಕಲಿಕಾ ಚಟುವಟಿಕೆ ಮಾಡಿಸುತ್ತಾರೆ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಕಾರ್ಯಕರ್ತರನ್ನು ಸೇವೆಯಿಂದ ಅಮಾನತ್ತು ಮಾಡಬೇಕು’ ಎಂದರು.

‘ಮಕ್ಕಳ ಹಾಗೂ ಗರ್ಭಿಣಿ ಸ್ರ್ತೀಯರ ಆಹಾರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಟೆಂಡರ್‌ದಾರರ ವಿರುದ್ದ ಕ್ರಮ ಕೈಗೊಂಡು ಪರವಾನಿಗೆ ರದ್ದು ಮಾಡಬೇಕು. ಗುತ್ತಿಗೆದಾರನ ಜತೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಆಂಜಿನಪ್ಪ, ಸಹದೇವಪ್ಪ, ನಿರಂಜನ್, ಕಿಶೋರ್, ತಿಮ್ಮಣ್ಣ, ವೆಂಕಟೇಶಪ್ಪ, ಮಂಜುನಾಥ್, ಕೇಶವ, ರಮೇಶ್, ಸುಪ್ರೀಂಚಲ, ಸುಧಾಕರ್, ನವೀನ್, ಶಿವು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT