ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸಲು ಒತ್ತಾಯ

ಭೂಗಳ್ಳರ ಹಾವಳಿಯಿಂದ ಕೆರೆ–ರಾಜಕಾಲುವೆ ಕಣ್ಮರೆ: ರೈತ ಸಂಘ ಸದಸ್ಯರ ಆರೋಪ
Last Updated 4 ಫೆಬ್ರುವರಿ 2022, 14:07 IST
ಅಕ್ಷರ ಗಾತ್ರ

ಕೋಲಾರ: ಕೆರೆ, ರಾಜಕಾಲುವೆ, ಗೋಮಾಳ ಹಾಗೂ ಸರ್ಕಾರಿ ಗುಂಡು ತೋಪುಗಳ ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವೆಂಕಟರಾಜಾ ಅವರಿಗೆ ಮನವಿ ಸಲ್ಲಿಸಿದರು.

‘ರಿಯಲ್‌ ಎಸ್ಟೇಟ್‌ ಮಾಫಿಯಾ ಕೆರೆಗಳು, ಗುಂಡುತೋಪು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿದೆ. ಕೆರೆಯಂಗಳ ಹಾಗೂ ರಾಜಕಾಲುವೆಗಳ ಜಾಗದಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತಿವೆ. ಲಂಚದಾಸೆಗೆ ಅಧಿಕಾರಿಗಳೇ ಈ ಅಕ್ರಮಕ್ಕೆ ಕೈಜೋಡಿಸಿದ್ದಾರೆ’ ಎಂದು ಸಂಘದ ಸದಸ್ಯರು ಆರೋಪಿಸಿದರು.

‘ಕೆರೆಗಳ ತವರು ಎಂದು ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ 2,800ಕ್ಕೂ ಹೆಚ್ಚು ಕೆರೆಗಳಿವೆ. ಈ ಹಿಂದೆ ಮಳೆಗಾಲದಲ್ಲಿ ಎಲ್ಲಾ ಕೆರೆಗಳು ತುಂಬುತ್ತಿದ್ದವು. ಆದರೆ, ಭೂಗಳ್ಳರ ಹಾವಳಿಯಿಂದ ಕೆರೆ, ರಾಜಕಾಲುವೆಗಳು ಕಣ್ಮರೆಯಾಗಿವೆ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಕಳವಳ ವ್ಯಕ್ತಪಡಿಸಿದರು.

‘ನಕಲಿ ದಾಖಲೆಪತ್ರ ಸೃಷ್ಟಿಸಿ ಗ್ರಾಮೀಣ ಭಾಗದ ಸರ್ಕಾರಿ ಗೋಮಾಳ, ಗುಂಡು ತೋಪು, ಸ್ಮಶಾನ, ಕೆರೆ ಅಂಗಳ ಒತ್ತುವರಿ ಮಾಡಲಾಗಿದೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೆರೆಗಳನ್ನು ಉಳಿಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರಿ ಜಮೀನು ರಕ್ಷಿಸಬೇಕಾದ ಅಧಿಕಾರಿಗಳೇ ಭೂಗಳ್ಳರ ಜತೆ ಶಾಮೀಲಾಗಿದ್ದಾರೆ’ ಎಂದು ದೂರಿದರು.

‘ಪೂರ್ವಿಕರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ರಾಜಕಾಲುವೆಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಿದ್ದರು. ಈಗ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರು ಕೆರೆಗಳಿಗೆ ಹರಿಯುತ್ತಿಲ್ಲ. ಮತ್ತೊಂದೆಡೆ ಒತ್ತುವರಿಯಿಂದ ಕೆರೆ ಹಾಗೂ ರಾಜಕಾಲುವೆಗಳ ಮೂಲ ಸ್ವರೂಪವೇ ಬದಲಾಗಿದೆ’ ಎಂದು ಹೇಳಿದರು.

180 ಪ್ರಕರಣ: ‘ಸರ್ಕಾರಿ ಆಸ್ತಿ ರಕ್ಷಿಸುವಲ್ಲಿ ವಿಫಲವಾಗಿರುವ ತಾಲ್ಲೂಕು ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ವಿರುದ್ಧ ಭೂಕಬಳಿಕೆ ನ್ಯಾಯಾಲಯದಲ್ಲಿ 180ಕ್ಕೂ ಪ್ರಕರಣ ದಾಖಲಿಸಿದ್ದೇವೆ. ಆದರೂ ಅಧಿಕಾರಿಗಳು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸಣ್ಣಪುಟ್ಟ ಜಮೀನು ಒತ್ತುವರಿ ಮಾಡುವ ರೈತರ ಮೇಲೆ ಶಿಸ್ತುಕ್ರಮ ಜರುಗಿಸುವ ಅಧಿಕಾರಿಗಳು ಕೆರೆ, ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿ ತೆರೆಮರೆಯಲ್ಲಿ ರಿಯಲ್‌ ಎಸ್ಟೇಟ್‌ ದಂಧೆಕೋರರ ಜತೆ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಜಿಲ್ಲಾಡಳಿತವು ಕೆರೆ, ರಾಜಕಾಲುವೆ ಹಾಗೂ ಸರ್ಕಾರಿ ಜಮೀನುಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು. ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಒತ್ತುವರಿಗೆ ನೆರವು ನೀಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ನಕಲಿ ದಾಖಲೆಪತ್ರ ಸೃಷ್ಟಿಸಿ ಸಾಗುವಳಿ ಚೀಟಿ ನೀಡಿರುವವರ ವಿರುದ್ಧ ತನಿಖೆ ನಡೆಸಬೇಕು. ಈ ಹಿಂದೆ ತಹಶೀಲ್ದಾರ್‌ ಆಗಿದ್ದ ವಿಜಯಣ್ಣ ಅವರ ಅವಧಿಯಲ್ಲಿ ನೀಡಿರುವ ಸಾಗುವಳಿ ಚೀಟಿ ರದ್ದುಪಡಿಸಿ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಕಾರ್ಯಾಧ್ಯಕ್ಷ ಹನುಮಯ್ಯ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT