ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕಾಯಂಗೆ ಒತ್ತಾಯ: ಧರಣಿ

ಸರ್ಕಾರದ ವಿರುದ್ಧ ಆರೋಗ್ಯ ಇಲಾಖೆ ಗುತ್ತಿಗೆ ಹೊರ ಗುತ್ತಿಗೆ ನೌಕರರ ಆಕ್ರೋಶ
Last Updated 30 ಸೆಪ್ಟೆಂಬರ್ 2020, 13:36 IST
ಅಕ್ಷರ ಗಾತ್ರ

ಕೋಲಾರ: ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರು ಇಲ್ಲಿ ಬುಧವಾರ ಧರಣಿ ನಡೆಸಿದರು.

‘ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸೇವೆ ಕಾಯಂಗೊಳಿಸುವಂತೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಆದರೆ, ಸರ್ಕಾರ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನೌಕರರು ಕೋವಿಡ್‌–19 ಸಂಕಷ್ಟದ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಧುಕೇಶ್ ಹೇಳಿದರು.

‘ಸೇವಾ ಭದ್ರತೆ ಇಲ್ಲದ ಕಾರಣ ನೌಕರರ ಕೆಲಸ ಅನಿಶ್ಚಿತವಾಗಿದೆ. ಮತ್ತೊಂದೆಡೆ ನೌಕರರಿಗೆ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಕಾಯಂ ನೌಕರರಿಗೆ ಹೋಲಿಸಿದರೆ ಗುತ್ತಿಗೆ ನೌಕರರ ವೇತನ ಕಡಿಮೆಯಿದ್ದು, ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಸರ್ಕಾರಕ್ಕೆ ನೌಕರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇತನ ತಾರತಮ್ಯ: ‘ಸರ್ಕಾರ ವೇತನ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ವೇತನ ನೀಡಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ನೌಕರರಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಸಮಾನ ವೇತನ, ಸೇವಾ ಭದ್ರತೆ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ನೌಕರರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ಇಲಾಖೆ ಅಧಿಕಾರಿಗಳು ಸಣ್ಣಪುಟ್ಟ ಕಾರಣಕ್ಕೆ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಕೆಲಸದ ಅವಧಿ ಮುಗಿದ ನಂತರವೂ ನೌಕರರಿಂದ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ನೌಕರರ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ಸಾಮಾನ್ಯ ರಜಾ ದಿನಗಳಲ್ಲೂ ನೌಕರರು ಕೆಲಸ ಮಾಡುತ್ತಿದ್ದು, ಹೆರಿಗೆ ರಜೆ ಹಾಗೂ ಪಿತೃತ್ವ ರಜೆ ನಿರಾಕರಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಬಜೆಟ್‌ ಹೆಚ್ಚಿಸಬೇಕು: ‘ಆರೋಗ್ಯ ಕ್ಷೇತ್ರದ ಬಜೆಟ್ ಹೆಚ್ಚಿಸಬೇಕು. ಸೇವೆ ಕಾಯಂಗೊಳಿಸಬೇಕು. ಎಲ್ಲಾ ಹುದ್ದೆಗಳನ್ನು ಕಾಯಂ ಹುದ್ದೆಗಳಾಗಿ ಸೃಷ್ಟಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಏಕರೂಪ ವೇತನ ಮಾದರಿ ಜಾರಿಗೊಳಿಸಬೇಕು. ನೌಕರರ ಬ್ಯಾಂಕ್‌ ಖಾತೆಗೆ ನೇರವಾಗಿ ವೇತನ ಪಾವತಿಸಬೇಕು. ಬೋನಸ್‌, ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ನೌಕರರ ಕಲ್ಯಾಣನಿಧಿ ಅಥವಾ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಸರ್ಕಾರಿ ನೇಮಕಾತಿಗಳಲ್ಲಿ ವಯಸ್ಸಿನ ಮಿತಿ ವಿಸ್ತರಿಸಬೇಕು. ಸೇವಾನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕು. ಪರಸ್ಪರ ವರ್ಗಾವಣೆ ಹಾಗೂ ಖಾಲಿಯಿರುವ ಹುದ್ದೆಯಲ್ಲಿ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಸದಸ್ಯರಾದ ಅರ್ಚನಾ, ಮಂಜು, ಹರೀಶ್‌ಕುಮಾರ್, ಶಿಲ್ಪಾ, ನೇತ್ರಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT