ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ– ಮಾವು ಬೆಲೆ ಕುಸಿತ: ಬೆಂಬಲ ಬೆಲೆಗೆ ಒತ್ತಾಯಿಸಿ ಪ್ರತಿಭಟನೆ

ಸಚಿವರ ವಿರುದ್ಧ ರೈತ ಸಂಘ ಸದಸ್ಯರ ಆಕ್ರೋಶ
Last Updated 30 ಜೂನ್ 2021, 13:03 IST
ಅಕ್ಷರ ಗಾತ್ರ

ಕೋಲಾರ: ಟೊಮೆಟೊ ಹಾಗೂ ಮಾವಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ರಸ್ತೆಗೆ ಟೊಮೆಟೊ ಮತ್ತು ಮಾವು ಸುರಿದ ಪ್ರತಿಭಟನಾಕಾರರು ಕೃಷಿ ಹಾಗೂ ತೋಟಗಾರಿಕೆ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಟೊಮೆಟೊ ಮತ್ತು ಮಾವು ಜಿಲ್ಲೆಯ ಪ್ರಮುಖ ಬೆಳೆಗಳು. ಕೋವಿಡ್‌, ಲಾಕ್‌ಡೌನ್‌ ಕಾರಣಕ್ಕೆ ಟೊಮೆಟೊ ಹಾಗೂ ಮಾವು ಬೆಲೆ ಗಣನೀಯವಾಗಿ ಕುಸಿದಿದೆ. ಬಡ್ಡಿ ಸಾಲ ಮಾಡಿ ಟೊಮೆಟೊ ಬೆಳೆದ ರೈತರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆ ಸ್ಪಂದಿಸಬೇಕಾದ ಕೃಷಿ ಮತ್ತು ತೋಟಗಾರಿಕೆ ಸಚಿವರು ನಾಪತ್ತೆಯಾಗಿದ್ದಾರೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಿಡಿಕಾರಿದರು.

‘ಕೋವಿಡ್‌ನಿಂದ ರೈತರ ಬದುಕು ಬರ್ಬರವಾಗಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಮತ್ತು ಮಾವು ಕೇಳುವವರಿಲ್ಲ. ಹೀಗಾಗಿ ರೈತರು ಟೊಮೆಟೊ ಮತ್ತು ಮಾವು ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದಾರೆ. ಮತ್ತೆ ಕೆಲ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಟೊಮೆಟೊ ಬೆಳೆ ಜಮೀನುಗಳಲ್ಲೇ ಕೊಳೆಯುತ್ತಿದೆ. ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯ ರೈತರು ಅಂತರ್ಜಲ ನಂಬಿ ಕೃಷಿ ಮಾಡುತ್ತಿದ್ದಾರೆ. ಸಾಲ ಮಾಡಿ ಟೊಮೆಟೊ ಬೆಳೆದ ರೈತರು ಸಾಲದ ಕಂತು ಹಾಗೂ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಒಂದೆಡೆ ಬೆಲೆ ಕುಸಿತವು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ತೂಕದಲ್ಲಿ ಮೋಸ ಮಾಡಿ ರೈತರನ್ನು ಶೋಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ರೈತಪರ ಕಾಳಜಿಯಿಲ್ಲ: ‘ಪ್ರತಿ ವರ್ಷ ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ, ಕೀಟಬಾಧೆ ಸೇರಿದಂತೆ ರೈತರು ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕುತ್ತಿದ್ದರೂ ಸರ್ಕಾರ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ರೈತಪರ ಸರ್ಕಾರಗಳೆಂದು ಹೇಳುತ್ತಾ ರೈತರನ್ನೇ ಮಾರಾಟಕ್ಕಿಟ್ಟು ಕೃಷಿ ಕ್ಷೇತ್ರ ನಾಶ ಮಾಡುತ್ತಿವೆ. ಆಳುವ ಸರ್ಕಾರಗಳಿಗೆ ರೈತಪರ ಕಾಳಜಿಯಿಲ್ಲ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಮಾವು ಹಣ್ಣುಗಳು ಮರದಿಂದ ಉದುರಿ ತೋಪಿನಲ್ಲೇ ಕೊಳೆಯುತ್ತಿವೆ. ಕೆಲ ರೈತರು ಮಾವು ಕೊಯ್ಲು ಮಾಡಿ ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾರೆ. ಬೇಗನೆ ಕೆಟ್ಟು ಹೋಗುವ ಮಾವು ಹಣ್ಣಿನ ಸಂರಕ್ಷಣೆಗೆ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳಿಲ್ಲ. ಸರ್ಕಾರ ರೈತರ ಕಣ್ಣೊರೆಸಲು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪ್ರತಿ ಹೆಕ್ಟೇರ್‌ ಬೆಳೆಗೆ ₹ 10 ಸಾವಿರ ಪರಿಹಾರ ಘೋಷಿಸಿ ಕೈತೊಳೆದುಕೊಂಡಿದೆ. ಪರಿಹಾರ ಪ್ಯಾಕೇಜ್‌ನಲ್ಲಿ ಮಾವು ಬೆಳೆಗಾರರನ್ನು ನಿರ್ಲಕ್ಷಿಸಿದೆ’ ಎಂದು ದೂರಿದರು.

ಹೋರಾಟ ತೀವ್ರ: ‘ಸರ್ಕಾರ ಶೀಘ್ರವೇ ರೈತರ ನೆರವಿಗೆ ಧಾವಿಸಬೇಕು. ಪ್ರತಿ ಟನ್ ಮಾವಿಗೆ ₹ 10 ಸಾವಿರ ಬೆಂಬಲ ಬೆಲೆ ಅಥವಾ ಒಂದು ಎಕರೆ ಮಾವಿನ ಬೆಳೆಗೆ ₹ 25 ಸಾವಿರ ವಿಶೇಷ ಪರಿಹಾರ ಘೋಷಿಸಬೇಕು. ಟೊಮೆಟೊ ಕೆ.ಜಿಗೆ ₹ 10 ಬೆಂಬಲ ಬೆಲೆ ಘೋಷಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಪ್ರಧಾನ ಕಾರ್ಯದರ್ಶಿ ಹನುಮಯ್ಯ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ಆಂಜಿನಪ್ಪ, ತಿಮ್ಮಣ್ಣ, ವೆಂಕಟೇಶಪ್ಪ, ಹರೀಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT