ರಸ್ತೆ– ಯುಜಿಡಿ ದುರಸ್ತಿಗೆ ಒತ್ತಾಯ

ಸೋಮವಾರ, ಮೇ 27, 2019
29 °C
ಇಟಿಸಿಎಂ ವೃತ್ತದಲ್ಲಿ ರಸ್ತೆತಡೆ ಮಾಡಿ ರೈತ ಸಂಘ ಸದಸ್ಯರ ಧರಣಿ

ರಸ್ತೆ– ಯುಜಿಡಿ ದುರಸ್ತಿಗೆ ಒತ್ತಾಯ

Published:
Updated:
Prajavani

ಕೋಲಾರ: ನಗರದ ರಸ್ತೆಗಳು, ಯುಜಿಡಿ ಹಾಗೂ ಮ್ಯಾನ್‌ಹೋಲ್‌ಗಳ ದುರಸ್ತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದ ಇಟಿಸಿಎಂ ವೃತ್ತದಲ್ಲಿ ಮಂಗಳವಾರ ರಸ್ತೆತಡೆ ಮಾಡಿ ಧರಣಿ ನಡೆಸಿದರು.

‘ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಅಧಿಕಾರಿಗಳು ಅಮೃತ್‌ ಯೋಜನೆಯಡಿ ಒಳಚರಂಡಿ ಕಾಮಗಾರಿಗಾಗಿ ನಗರದ ಬಹುತೇಕ ರಸ್ತೆಗಳನ್ನು ಅಗೆದು ಒಂದೂವರೆ ವರ್ಷವಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಯುಜಿಡಿ ಕಾಮಗಾರಿಯಿಂದ ರಸ್ತೆಗಳ ಚಿತ್ರಣವೇ ಬದಲಾಗಿದ್ದು, ನಗರವು ಗುಂಡಿಮಯವಾಗಿದೆ. ರಸ್ತೆಗಳು ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ನಗರವಾಸಿಗಳ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಚೆನ್ನಾಗಿದ್ದ ರಸ್ತೆಗಳನ್ನು ಯುಜಿಡಿ ಕಾಮಗಾರಿಗಾಗಿ ಅಗೆದು ಹಾಳು ಮಾಡಲಾಗಿದೆ. ರಸ್ತೆಗಳ ದುಸ್ಥಿತಿಯಿಂದ ಸಾರ್ವಜನಿಕರು ಪ್ರತಿನಿತ್ಯ ಬವಣೆ ಪಡುವಂತಾಗಿದೆ. ದೂಳಿನ ಪ್ರಮಾಣ ಹೆಚ್ಚಿದ್ದು, ಜನ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ. ಇದಕ್ಕೆಲ್ಲಾ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ’ ಎಂದು ದೂರಿದರು.

ಮೃತ್ಯುಕೂಪ: ‘ಗುಂಡಿಮಯ ರಸ್ತೆಗಳು ಮೃತ್ಯುಕೂಪವಾಗಿದ್ದು, ಆಗಾಗ್ಗೆ ಅಪಘಾತ ಸಂಭವಿಸುತ್ತಿವೆ. ಈಗಾಗಲೇ ಹಲವು ಬೈಕ್‌ ಸವಾರರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ರಸ್ತೆ ಸರಿಪಡಿಸುವ ಜವಾಬ್ದಾರಿಯಿಲ್ಲ. ಸಾರ್ವಜನಿಕರು ರಸ್ತೆ ದುರಸ್ತಿಗೆ ಒತ್ತಾಯಿಸಿದರೆ ಕುಂಟು ನೆಪ ಹೇಳುತ್ತಾ ಕಾಲ ದೂಡುತ್ತಿದ್ದಾರೆ ಎಂದು ಧರಣಿನಿರತರು ಕಿಡಿಕಾರಿದರು.

‘ಯುಜಿಡಿ ಕಾಮಗಾರಿಯಿಂದ ಹಲವೆಡೆ ಕುಡಿಯುವ ನೀರು ಸರಬರಾಜು ಪೈಪ್‌ಗಳಿಗೆ ಹಾನಿಯಾಗಿದೆ. ಇದರಿಂದ ಕುಡಿಯುವ ನೀರು ಪೋಲಾಗುತ್ತಿದೆ. ಹಲವು ಮನೆಗಳ ನಲ್ಲಿಯಲ್ಲಿ ಕೊಳಚೆ ನೀರು ಬರುತ್ತಿದೆ. ಸಾಕಷ್ಟು ಬಡಾವಣೆಗಳಲ್ಲಿ ಯುಜಿಡಿ ಸೌಕರ್ಯವಿದ್ದರೂ ಅಧಿಕಾರಿಗಳು ಪುನಃ ಅದೇ ಭಾಗದಲ್ಲಿ ಕಾಮಗಾರಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಭರವಸೆ ಹುಸಿ: ‘ಕೆಯುಡಬ್ಲ್ಯೂಎಸ್‌ಡಿಬಿ, ಲೋಕೋಪಯೋಗಿ ಹಾಗೂ ನಗರಸಭೆ ಅಧಿಕಾರಿಗಳು ರಸ್ತೆ ದುರಸ್ತಿ ವಿಚಾರದಲ್ಲಿ ಪರಸ್ಪರರತ್ತ ಬೆಟ್ಟು ತೋರಿಸುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಜನಪರ ಕಾಳಜಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿಯು ಒಂದು ತಿಂಗಳೊಳಗೆ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಹುಸಿಯಾಗಿದೆ. ಕ್ಷೇತ್ರದ ಶಾಸಕರು ರಸ್ತೆ ಅವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿಲ್ಲ. ರಸ್ತೆ ದುರಸ್ತಿ ಮಾಡದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಬಾರದು. ರಸ್ತೆಗಳಿಗೆ ಶೀಘ್ರವೇ ಡಾಂಬರು ಹಾಕಬೇಕು. ಕಳಪೆ ಕಾಮಗಾರಿ ಸಂಬಂಧ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ನಾಗೇಶ್, ವೆಂಕಟೇಶಪ್ಪ, ತಿಮ್ಮಣ್ಣ, ಆಂಜನಪ್ಪ, ವೆಂಕಟೇಶ್, ಉಮಾ, ಪವಿತ್ರಾ, ಕಾವ್ಯಾಂಜಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !