ಶುಕ್ರವಾರ, ಏಪ್ರಿಲ್ 23, 2021
22 °C
ಪೇರಲ ಬೆಳೆಯಲ್ಲಿ ಜಂತು ಹುಳು ಬಾಧೆ

ಜೈವಿಕ ಕೀಟ ನಾಶಕ ಬಳಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಪೇರಲ ಬೆಳೆಯಲ್ಲಿ ಜಂತು ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೋಗ ಹತೋಟಗೆ ರೈತರು ಜೈವಿಕ ಕೀಟ ನಾಶಕಗಳನ್ನು ಬಳಸಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೇರಲ ಬೆಳೆಯು ಪ್ರಮುಖ ವಾಣಿಜ್ಯ ಹಣ್ಣು ಬೆಳೆಯಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಕೆಲ ವರ್ಷಗಳಿಂದ ಈ ಬೆಳೆ ಜಂತು ಹುಳುವಿನ ಬಾಧೆಗೊಳಗಾಗಿ ಸೊರಗು ರೋಗಕ್ಕೆ ತುತ್ತಾಗುತ್ತಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ತೈವಾನ್ ತಳಿಯ ಪೇರಲ ಸಸಿಗಳು ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿವೆ ಎಂದು ಹೇಳಿದ್ದಾರೆ.

ಸೊರಗು ರೋಗ ಬಾಧಿತ ಸಸಿಗಳ ಎಲೆಗಳು ಆರಂಭದಲ್ಲಿ ಹಳದಿಯಾಗಿ ಕಾಣುತ್ತವೆ. ಸಸಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಗಿಡಗಳು ಶಕ್ತಿಹೀನವಾಗಿ ಚೇತರಿಕೆ ಕಳೆದುಕೊಳ್ಳುತ್ತವೆ. ರೆಂಬೆ ಟೊಳ್ಳಾಗುತ್ತವೆ. ಬೇರುಗಳ ಮೇಲೆ ಸಣ್ಣದಾದ ಗಂಟು ಕಾಣಿಸಿಕೊಳ್ಳುತ್ತವೆ. ರೋಗ ತಗುಲಿದ ಸಸಿಗಳನ್ನು ನಾಟಿ ಮಾಡಿದಾಗ ತೋಟಗಳಲ್ಲಿ ಗಿಡಗಳು ಕಳೆಹೀನವಾಗಿರುತ್ತವೆ. ಗಂಟುಗಳು ಬೇರುಗಳ ಮೇಲೆ ವ್ಯಾಪಕವಾಗಿ ಹರಡಿಕೊಂಡು ಸಾಸಿವೆ ಕಾಳಿನಿಂದ ಗೆಣಸಿನಂತಹ ಗಾತ್ರದವರೆಗೆ ದೊಡ್ಡದಾಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ರೋಗದಿಂದ ಗಿಡದಲ್ಲಿ ಹೂವುಗಳ ಪ್ರಮಾಣ ಕಡಿಮೆಯಾಗುತ್ತದೆ. ಗಂಟುಗಳಾದರೆ ಹೊಸ ಬೇರುಗಳು ಚಿಗುರುವುದನ್ನು ಕಾಣಬಹುದು. ಕ್ರಮೇಣ ಬೇರುಗಳು ಸಹ ಇತರ ರೋಗಕಾರಕ ಶಿಲೀಂಧ್ರಗಳ ಬಾಧೆಗೊಳಗಾಗಿ ಕೊಳೆತು ದಾರದ ಎಳೆಗಳಂತೆ ವಿಕೃತವಾಗುತ್ತವೆ. ರೋಗ ತೀವ್ರಗೊಂಡರೆ ಬೇರುಗಳು ಸಂಪೂರ್ಣವಾಗಿ ಕೊಳೆತು ಗಿಡಗಳು ಒಣಗುತ್ತವೆ. ನರ್ಸರಿ ಹಂತದಲ್ಲಿ ರೋಗ ಕಾಣಿಸಿಕೊಂಡರೆ ಶೇ 100ರಷ್ಟು ಬೆಳೆ ಹಾನಿಯಾಗುತ್ತದೆ ಎಂದು ತಿಳಿಸಿದ್ದಾರೆ.

ರೋಗಪೀಡಿತ ಸಸಿಗಳನ್ನು ನೆಡಬಾರದು ಹಾಗೂ ಅಂತಹ ಗಿಡಗಳನ್ನು ನಾಶಪಡಿಸಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ನೀರಿನೊಂದಿಗೆ ಜಂತುಗಳ ರೋಗ ಪ್ರಸರಣ ತಡೆಗಟ್ಟಬಹುದು. ಜೈವಿಕ ಕೀಟ ನಾಶಕಗಳಾದ ಟ್ರೈಕೋಡರ್ಮಾ ಹಾರ್ಜಿಯಾನಂ, ಸುಡೋಮೊನಾಸ್ ಫ್ಲೂರೆಸೆನ್ಸ್ ಮತ್ತು ಪೆಸೆಲೋಮೈಸಿಸ್ ಲಿಲಾಸಿನಸ್‌ ಬೆರೆಸಿದ ಬೇವಿನ ಹಿಂಡಿ ಅಥವಾ ಹೊಂಗೆ ಹಿಂಡಿ, ಎರೆಹುಳು ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ಗಿಡಗಳಿಗೆ ಹಾಕಬೇಕು ಎಂದು ಹೇಳಿದ್ದಾರೆ.

ರಾಸಾಯನಿಕ ಜಂತುನಾಶಕ ಕಾರ್ಬೋಪ್ಯೂರಾನ್ 3ಜಿಯನ್ನು ಪ್ರತಿ ಗಿಡದ ಬುಡಕ್ಕೆ ಹಾಕಬೇಕು. ಹೊಸ ಸಸಿ ನಾಟಿ ಮಾಡುವಾಗ ಪ್ರತಿ ಗುಣಿಗೆ 200 ಗ್ರಾಂ ಬೇವಿನ ಹಿಂಡಿಯನ್ನು ಜೈವಿಕ ಕೀಟ ನಾಶಕಗಳೊಂದಿಗೆ ಮಿಶ್ರಣ ಮಾಡಿ ನಾಟಿ ಮಾಡುವ ಮೊದಲು ಹಾಕಬೇಕು. ಹೆಚ್ಚಿನ ಮಾಹಿತಿಗೆ 7829512236 ಮೊಬೈಲ್‌ ಸಂಖ್ಯೆ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.