ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಅಕ್ರಮ: ಮುಲಾಜಿಲ್ಲದೆ ಶಿಸ್ತುಕ್ರಮ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಾಡಳಿತ ಸಚಿವ ನಾಗರಾಜ್‌ ಖಡಕ್‌ ಎಚ್ಚರಿಕೆ
Last Updated 22 ಫೆಬ್ರುವರಿ 2021, 15:41 IST
ಅಕ್ಷರ ಗಾತ್ರ

ಕೋಲಾರ: ‘ನಗರಸಭೆ ವ್ಯಾಪ್ತಿಯ ಕಾಮಗಾರಿಗಳಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ದೂರು ಬಂದಿವೆ. ಅಕ್ರಮದ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿನ ನಗರಸಭೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಒಳಚರಂಡಿ, ರಸ್ತೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ. ಭ್ರಷ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಸಹಿಸುವುದಿಲ್ಲ. ತಪ್ಪು ಮಾಡಿರುವವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಸುಮ್ಮನೆ ಬಿಡುವುದಿಲ್ಲ’ ಎಂದು ಗುಡುಗಿದರು.

‘ನಗರದ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ದೂರು ಬಂದಿವೆ. ಉನ್ನತ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡ ರಚಿಸಿ, ಅಕ್ರಮದ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ. ಆಡಳಿತ ಯಂತ್ರ ಸರಿ ದಾರಿಗೆ ತರುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ನಗರಸಭೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಬೇಕು. ಇದರ ಜತೆಗೆ ನಗರವಾಸಿಗಳಿಗೆ ನಗರಸಭೆಯಿಂದ ಮೂಲಸೌಕರ್ಯ ಕಲ್ಪಿಸಬೇಕು. ಹಲವು ವರ್ಷಗಳಿಂದ ಆಸ್ತಿ ಗೊಂದಲ ಶೀಘ್ರವೇ ಪರಿಹರಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕೊರೊನಾ ಕಾರಣಕ್ಕೆ 8 ತಿಂಗಳಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈ ಸಂಗತಿಯನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.

ವಿಶೇಷ ಅನುದಾನ: ‘ಜಿಲ್ಲಾ ಕೇಂದ್ರದ ನಗರಸಭೆ ಕಟ್ಟಡ ಸುಮಾರು 96 ವರ್ಷಗಳಷ್ಟು ಹಳೆಯದಾಗಿದ್ದು, ಗೋಡೆಗಳು ಶಿಥಿಲಗೊಂಡಿವೆ. ಈ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಂಡು ನಗರಸಭೆಗೆ ಹೊಸದಾಗಿ ಕಟ್ಟಡ ನಿರ್ಮಿಸಲು ರಾಜ್ಯ ಬಜೆಟ್‌ನಲ್ಲಿ ₹ 4 ಕೋಟಿ ಮತ್ತು ನಗರದ ರಸ್ತೆಗಳ ಅಭಿವೃದ್ಧಿಗೆ ₹ 17.5 ಕೋಟಿ ವಿಶೇಷ ಅನುದಾನ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮನವಿ ಮಾಡಿದರು.

‘ನಗರಸಭೆಯಿಂದ ಹಿಂಪಡೆದಿರುವ ₹ 5 ಕೋಟಿ ಅನುದಾನ ವಾಪಸ್ ನೀಡಬೇಕು. ಘನ ತ್ಯಾಜ್ಯ ವಿಲೇವಾರಿಗೆ ನೀಡಿರುವ 2 ಎಕರೆ ಜಾಗ ಸಾಲುವುದಿಲ್ಲ. 28 ಎಕರೆ ಖಾಸಗಿ ಜಮೀನು ಖರೀದಿಸುವುದಕ್ಕೆ ಸಂಬಂಧಪಟ್ಟ ಕಡತ ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ. ಈ ಜಮೀನು ಖರೀದಿಗೆ ₹ 28 ಕೋಟಿ ನೀಡಬೇಕು’ ಎಂದು ಕೋರಿದರು.

ಸೌಕರ್ಯ ಸಿಕ್ಕಿಲ್ಲ: ‘ನಗರಸಭೆಯಲ್ಲಿ ಕಾಯಂ, ಸಮಾನ ವೇತನ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರೆಗೆ ಹೊರ ಗುತ್ತಿಗೆ ಆಧಾರದ 9 ಪೌರ ಕಾರ್ಮಿಕರು ನಿವೃತ್ತರಾಗಿದ್ದಾರೆ. ಅವರಿಗೆ ನಯಾ ಪೈಸೆ ನಿವೃತ್ತಿ ಸೌಕರ್ಯ ಸಿಕ್ಕಿಲ್ಲ. ಅವರಿಗೆ ನ್ಯಾಯ ದೊರಕಿಸಿದರೆ ತಮಗೆ ಗೌರವ ಸಲ್ಲುತ್ತದೆ’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಹೇಳಿದರು.

‘ನಗರದಲ್ಲಿ 3,400ಕ್ಕೂ ಹೆಚ್ಚು ನಿವೇಶನರಹಿತರಿದ್ದಾರೆ. ಇವರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. 50 ಎಕರೆ ಜಮೀನು ಖರೀದಿಗೆ ಅನುಕೂಲವಾಗುವಂತೆ ದರ ನಿಗದಿಪಡಿಸಿ. ಹಲವು ವರ್ಷಗಳಿಂದ ಡಿಸಿಬಿ ಶಾಖೆಯಲ್ಲಿ ಇರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ’ ಎಂದು ಸದಸ್ಯ ಎಸ್.ಆರ್.ಮುರಳಿಗೌಡ ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಆಯುಕ್ತ ಶ್ರೀಕಾಂತ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT