ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜಕ್ಕೆ ಗೌರವ ಎಲ್ಲರ ಕರ್ತವ್ಯ: ಸಂಜೀವಪ್ಪ

Last Updated 23 ಜುಲೈ 2021, 4:43 IST
ಅಕ್ಷರ ಗಾತ್ರ

ಕೋಲಾರ: ರಾಷ್ಟ್ರಧ್ವಜಕ್ಕೆ ಸಲ್ಲಬೇಕಾದ ಗೌರವವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ನೀಡಲೇಬೇಕು. ಅದಕ್ಕಾಗಿ ಭಾರತ ಸೇವಾದಳದಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾರತ ಸೇವಾದಳದಿಂದ ಗುರುವಾರ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಪ್ರಯುಕ್ತ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು
ಮಾತನಾಡಿದರು.

ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕಿರುವ ಮಾನದಂಡ, ಧ್ವಜ ಕಟ್ಟುವ ವಿಧಾನ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ತರಬೇತಿ ಪಡೆದು ಗ್ರಾ.ಪಂ ಹಾಗೂ ತಾ.ಪಂ ಮಟ್ಟದಲ್ಲಿ ಶಿಸ್ತು, ಸಮಯಪಾಲನೆ ಪಾಲಿಸಬೇಕು. ರಾಷ್ಟ್ರದ ತ್ರಿವರ್ಣ ಧ್ವಜದ ಇತಿಹಾಸ ಕುರಿತು ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಅವಮಾನ ತರುವಂತಹ ಸಂಗತಿ ನಡೆಯಬಾರದು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತಿ ಪಂಚಾಯಿತಿಯಲ್ಲಿ ಭಾರತ ಸೇವಾದಳದ ಶಾಖೆಯಾಗಬೇಕು. ಗ್ರಾಮದ 33 ಯುವಜನತೆಯನ್ನು ಕ್ರೋಡೀಕರಿಸುವ ಕಾರ್ಯವನ್ನು ಪಿಡಿಒಗಳು ಮಾಡಬೇಕು. ರಾಷ್ಟ್ರಧ್ವಜ ಹಾರಿಸುವ, ಮಡಚುವ ವಿಧಾನ, ಸಂಗ್ರಹಿಸಿಡುವ ಪದ್ಧತಿ, ಆರೋಹಣ, ಅವರೋಹಣ ಸಂಪ್ರದಾಯ, ಹಾಡಬೇಕಾದ ಗೀತೆಗಳು ಮತ್ತಿತರ ವಿಚಾರಗಳನ್ನು ಸೇವಾದಳದ ಸಂಘಟಕರು ಮತ್ತು ತರಬೇತುದಾರರು ಖುದ್ದಾಗಿ ಬಂದು ತರಬೇತಿ ನೀಡಿ ವಿವರಿಸುತ್ತಾರೆ ಎಂದು ತಿಳಿಸಿದರು.

ನಾ.ಸು. ಹರ್ಡೀಕರ್ ಅವರಿಂದ ಸ್ಥಾಪಿಸಲ್ಪಟ್ಟ ಹಿಂದೂಸ್ತಾನ್ ಸೇವಾದಳ ಸಂಘಟನೆಯು ಸ್ವಾತಂತ್ರ್ಯ ನಂತರ ರಾಜಕೀಯರಹಿತ ಸಂಘಟನೆಯಾಗಿ ಭಾರತ ಸೇವಾದಳವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆ ರಾಷ್ಟ್ರಭಕ್ತಿ ಮೂಡಿಸುವ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದೆ. ಸರ್ಕಾರದ ಆದೇಶದಂತೆ ಸೇವಾದಳದ ಚಟುವಟಿಕೆಯನ್ನು ಪಿಯುಸಿ, ಪದವಿ ಹಂತಕ್ಕೆ ವಿಸ್ತರಣೆ ಮಾಡಲಾಗಿದೆ. ಈಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಷ್ಟ್ರಧ್ವಜ ಮಾಹಿತಿ ತಿಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎನ್. ನಾಗರಾಜ್, ಪಂಚಾಯಿತಿ ಕಚೇರಿಗಳ ಮೇಲೆ ಬಾವುಟ ಹಾರಿಸುವ ವಿಧಾನದಲ್ಲಿ ತಪ್ಪಾದರೆ ಅಥವಾ ಹಾರಿಸಿಲ್ಲವೆಂದರೆ ಸೇವೆಯಿಂದಲೇ ಅಮಾನತುಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತ ಸೇವಾದಳದ ಹಿರಿಯ ಕಾರ್ಯಕರ್ತ ಕಾಶಿಂಕುಂಟೆ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸುಮಾರು ಮೂರು ಗಂಟೆಗಳ ಕಾಲ ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.

ರೋಟರಿ ಸೆಂಟ್ರಲ್ ಸಂಸ್ಥೆ ಅಧ್ಯಕ್ಷ ಸಿಎಂಆರ್ ಶ್ರೀನಾಥ್, ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ. ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಎಸ್. ಸುಧಾಕರ್, ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಡಿ. ಮುನೇಶ್, ಸಂಪತ್‍ಕುಮಾರ್, ಬಹುದ್ದೂರ್ ಸಾಬ್, ಆರ್. ರವಿಕುಮಾರ್, ಎಂ. ನಾಗರಾಜ್ ದಾನೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT