ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ದಾಳಿ: ಸುದೀರ್ಘ ಪರಿಶೀಲನೆ ಅಂತ್ಯ

ತನಿಖೆಗೆ ಅಸಹಕಾರ: ಕ್ಯಾಷಿಯರ್‌ ಮೇಲೆ ಹಲ್ಲೆ ಆರೋಪ
Last Updated 12 ಅಕ್ಟೋಬರ್ 2019, 12:32 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್‌.ಜಾಲಪ್ಪರ ನಿವಾಸ, ವೈದ್ಯಕೀಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸತತ 3 ದಿನಗಳ ಸುದೀರ್ಘ ಪರಿಶೀಲನೆ ಶನಿವಾರ ಅಂತ್ಯಗೊಂಡಿತು.

ಜಾಲಪ್ಪ ಅವರ ಸೋದರ ಅಳಿಯ ಹಾಗೂ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಅವರನ್ನು ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದಿಂದ ನಗರಕ್ಕೆ ಕರೆತಂದಿದ್ದ ಐ.ಟಿ ಅಧಿಕಾರಿಗಳು ತಡರಾತ್ರಿವರೆಗೆ ವಿಚಾರಣೆ ನಡೆಸಿದರು.

ಸುಮಾರು 30 ಮಂದಿ ಅಧಿಕಾರಿಗಳ ತಂಡವು ನಾಗರಾಜ್‌ ಅವರನ್ನು ವೈದ್ಯಕೀಯ ಕಾಲೇಜು ಹಾಗೂ ಅತಿಥಿಗೃಹಕ್ಕೆ ಕರೆದೊಯ್ದು ಮೂರ್ನಾಲ್ಕು ವರ್ಷಗಳ ಪ್ರವೇಶಾತಿ ಪ್ರಕ್ರಿಯೆ, ಶುಲ್ಕ ಸಂಗ್ರಹಣೆ, ಸೀಟು ಹಂಚಿಕೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿತು. ಶಿಕ್ಷಣ ಸಂಸ್ಥೆಗಳ ಹಣಕಾಸು ವಹಿವಾಟು, ಆದಾಯ ಮತ್ತು ಆಸ್ತಿ ತೆರಿಗೆ ಪಾವತಿ, ಬ್ಯಾಂಕ್‌ ಖಾತೆಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.

ಅಲ್ಲದೇ, ಪ್ರವೇಶಾತಿ ಪ್ರಕ್ರಿಯೆ ಹಾಗೂ ಶುಲ್ಕ ಪಾವತಿ ಸಂಬಂಧ ಸಂಸ್ಥೆಯ ಕೆಲ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಂಡರು. ಸಂಸ್ಥೆಯ ಕುಲಸಚಿವ ಡಾ.ಕೆ.ಎನ್.ವಿ.ಪ್ರಸಾದ್, ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಲಕ್ಷ್ಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೇವರಾಜ ಅರಸು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯಲ್ಲಿ ಈ ಹಿಂದೆ ಸದಸ್ಯರಾಗಿದ್ದ ಸಂಬಂಧ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು. ಬೆಂಗಳೂರಿನ ಐ.ಟಿ ಕಚೇರಿಯಲ್ಲಿ ಅ.15ರಂದು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನಾಗರಾಜ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದರು.

ಅಧಿಕಾರಿಗಳಿಂದ ಹಲ್ಲೆ: ವಿಚಾರಣೆ ವೇಳೆ ಐ.ಟಿ ಅಧಿಕಾರಿಗಳು ವೈದ್ಯಕೀಯ ಕಾಲೇಜಿನ ಕ್ಯಾಷಿಯರ್‌ ನಾರಾಯಣಸ್ವಾಮಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 3 ದಿನಗಳಿಂದ ನಾರಾಯಣಸ್ವಾಮಿಯ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಅವರ ಮೊಬೈಲ್ ವಶಕ್ಕೆ ಪಡೆಯಲೆತ್ನಿಸಿದ್ದರು. ಆದರೆ, ಮೊಬೈಲ್‌ ಕೊಡಲು ನಿರಾಕರಿಸಿದ ನಾರಾಯಣಸ್ವಾಮಿ ಸಿಮ್‌ ಕಾರ್ಡ್‌ ಕಿತ್ತೆಸೆದಿದ್ದರು. ತನಿಖೆಗೆ ಸಹಕರಿಸದಿದ್ದರಿಂದ ಅಸಮಾಧಾನಗೊಂಡ ಅಧಿಕಾರಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT