ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆಗೆ ‘ಜಲಶಕ್ತಿ’ ಪರಿಹಾರ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅಭಿಪ್ರಾಯ
Last Updated 19 ಜುಲೈ 2019, 6:31 IST
ಅಕ್ಷರ ಗಾತ್ರ

ಕೋಲಾರ: ‘ಜಲಶಕ್ತಿ ಅಭಿಯಾನದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಿದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ. ಇದಕ್ಕೆ ಕಾರಣ ಏನೆಂದು ಗೊತ್ತಿದ್ದರೂ ಜನರಿಂದ ತಪ್ಪು ನಡೆಯುತ್ತಲೇ ಇದೆ’ ಎಂದು ವಿಷಾದಿಸಿದರು.

‘ಜಲಶಕ್ತಿ ಅಭಿಯಾನ ಅನುಷ್ಠಾನದಲ್ಲಿ ಕೋಲಾರ ಜಿಲ್ಲೆಯು ರಾಷ್ಟ್ರ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ. ಅಧಿಕಾರಿಗಳು ಅಭಿಯಾನದ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಕಟ್ಟಡಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವಂತೆ 15 ದಿನದೊಳಗೆ ನೋಟಿಸ್ ನೀಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ವರ್ಷಕ್ಕೆ 36 ಮೀಟರ್‌ನಷ್ಟು ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮಟ್ಟ ಸುಧಾರಿಸಲು ಕಡ್ಡಾಯವಾಗಿ ಎಲ್ಲಾ ಕಟ್ಟಡಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಜತೆಗೆ ಜಲ ಮರುಪೂರಣ ಮಾಡಬೇಕು’ ಎಂದು ಸಲಹೆ ನೀಡಿದರು.

‘ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ದೇವರಾಜ ಅರಸು ಕಾಲೇಜಿನ ಕಟ್ಟಡಗಳಲ್ಲೂ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವಂತೆ ತಿಳಿಸಬೇಕು. ಹೊಸ ಲೇಔಟ್, ಅಪಾರ್ಟ್‌ಮೆಂಟ್‌ ನಿರ್ಮಿಸುವವರು ಕಡ್ಡಾಯವಾಗಿ ಮಳೆ ಕೊಯ್ಲು ವಿಧಾನ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ತಿಳಿವಳಿಕೆ ನೋಟಿಸ್ ನೀಡಬೇಕು’ ಎಂದು ತಿಳಿಸಿದರು.

ಅರಿವು ಮೂಡಿಸಬೇಕು: ‘ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದಡಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯು ಮಳೆ ಕೊಯ್ಲು ವಿಧಾನ, ಚೆಕ್‌ಡ್ಯಾಂ ನಿರ್ಮಾಣ, ಅರಣ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ ಅರಣ್ಯ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಸಾಮಾಜಿಕ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 1,000 ಸಸಿ ವಿತರಿಸಿ ಬೆಳೆಸಲು ಉದ್ದೇಶಿಸಲಾಗಿದೆ. ಸರ್ಕಾರಿ ಕಾಲೇಜು ಮತ್ತು ಪ್ರೌಢ ಶಾಲೆಗಳಲ್ಲಿ ಜಲಶಕ್ತಿ ಅಭಿಯಾನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸಸಿ ವಿತರಿಸಲಾಗುತ್ತಿದೆ’ ಎಂದು ವಿವರಿಸಿದರು.

ಅಂತರ್ಜಲ ಸುಧಾರಿಸಿದೆ: ‘ಕೆ.ಸಿ ವ್ಯಾಲಿ ಯೋಜನೆ ನೀರು ಜಿಲ್ಲೆಗೆ ಹರಿದು ಬಂದ ನಂತರ ಅಂತರ್ಜಲ ಮಟ್ಟ ಸಾಕಷ್ಟು ಸುಧಾರಿಸಿದೆ. ಲಕ್ಷ್ಮೀಸಾಗರ, ಉದ್ದಪ್ಪನಹಳ್ಳಿ, ನರಸಾಪುರ, ದೊಡ್ಡವಲ್ಲಭಿ, ಚೌಡದೇನಹಳ್ಳಿ, ಸೂಲೂರು ಕೆರೆ ತುಂಬಿ ಆಗ್ರಹಾರ ಕೆರೆಗೆ ಅರ್ಧದಷ್ಟು ನೀರು ಬಂದಿದೆ. ಮಾಲೂರು ತಾಲ್ಲೂಕಿನ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ಕೆರೆಗಳು ತುಂಬಿದರೆ ಸುತ್ತಮುತ್ತ ಸಾಕಷ್ಟು ನೀರು ಇಂಗಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT