ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಅಭಿಯಾನಕ್ಕೆ ವರ್ಷ: 'ಜ.16 ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ'

Last Updated 17 ಜನವರಿ 2022, 13:53 IST
ಅಕ್ಷರ ಗಾತ್ರ

ಕೋಲಾರ: ‘ಜಗತ್ತಿನ ಅತಿ ದೊಡ್ಡ ಮತ್ತು ವೇಗದ ಲಸಿಕೆ ಅಭಿಯಾನವು ವರ್ಷ ಪೂರೈಸಿದ್ದು, ಜ.16 ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಕೋವಿಡ್‌ ಲಸಿಕೆ ಸಂಶೋಧನೆ ಆಗದಿದ್ದರೆ 135 ಕೋಟಿ ಜನ ಕೋವಿಡ್‌ ಸಂಕಷ್ಟದಲ್ಲಿ ಸಿಲುಕಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೋವಿಡ್‌ ಲಸಿಕೆ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು ದೇಶದ ಜನರನ್ನು ದೊಡ್ಡ ಅಪಾಯದಿಂದ ಪಾರು ಮಾಡುವ ಮೂಲಕ ಹೊಸ ಅಧ್ಯಾಯ ಬರೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದಲ್ಲಿ 2021ರ ಜ.16ರಂದು ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಯಿತು. ನಂತರ 9 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತವು ಜಾಗತಿಕ ಗುಣಮಟ್ಟದ ಸ್ವದೇಶಿ 2ನೇ ಲಸಿಕೆ ಅಭಿವೃದ್ಧಿಪಡಿಸಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು’ ಎಂದು ಹೇಳಿದರು.

‘ಕಳೆದೊಂದು ವರ್ಷದಲ್ಲಿ ಸುಮಾರು 157 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ. ಸುಮಾರು 66 ಕೋಟಿ ಮಂದಿಗೆ ಎರಡು ಡೋಸ್ ಮತ್ತು 91 ಕೋಟಿ ಮಂದಿಗೆ ಒಂದು ಡೋಸ್ ಹಾಕಲಾಗಿದೆ. ಇದೀಗ ಪ್ರತಿನಿತ್ಯ ಸುಮಾರು 43 ಲಕ್ಷ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಜತೆಗೆ ಮೊದಲ ಎರಡು ಡೋಸ್‌ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. 15 ವರ್ಷದಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, 3.31 ಕೋಟಿ ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ’ ಎಂದರು.

‘ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಪಾನೀಸ್ ಎನ್ಸೆಫಾಲಿಟಿಸ್ ಲಸಿಕೆ ಸಂಶೋಧಿಸಿದ್ದರೂ ಭಾರತಕ್ಕೆ ಬರಲು 83 ವರ್ಷ ಬೇಕಾಯಿತು. ಪೋಲಿಯೊ ಲಸಿಕೆ ಭಾರತವನ್ನು ತಲುಪಲು 23 ವರ್ಷ ಬೇಕಾಯಿತು. ಧನುರ್ವಾಯು ಲಸಿಕೆ ಜಗತ್ತಿಗೆ ಬಂದ 54 ವರ್ಷಗಳ ನಂತರ ಭಾರತಕ್ಕೆ ಬಂದಿತು. ಆದರೆ, ಕೋವಿಡ್ ಲಸಿಕೆಯನ್ನು ಮೊದಲು ಇಂಗ್ಲೆಂಡ್‌ನಲ್ಲಿ ನಂತರ ಭಾರತದಲ್ಲಿ ಪರಿಚಯಿಸಲಾಯಿತು’ ಎಂದು ವಿವರಿಸಿದರು.

ವೈದ್ಯಕೀಯ ಕಾಲೇಜು: ‘ಜಿಲ್ಲೆಗೆ 6 ಲಕ್ಷ ಮನೆ, ವೈದ್ಯಕೀಯ ಕಾಲೇಜು ಆಸ್ಪತ್ರೆ, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು, ಇಎಸ್‌ಐ ಆಸ್ಪತ್ರೆ, ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ, ಹನಿ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಸಮನ್ವಯ ಸಮಿತಿ ಉಪಾಧ್ಯಕ್ಷ ವಿಜಯ್‌ಕುಮಾರ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಸಿ.ಡಿ.ರಾಮಚಂದ್ರಗೌಡ, ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT