ಗುರುವಾರ , ಜನವರಿ 28, 2021
15 °C
ಜನಸೇವಕ ಸಮಾವೇಶ l ಬಿಜೆಪಿ ಬೆಂಬಲಿತರಿಗೆ ಸನ್ಮಾನ

ಕಾಂಗ್ರೆಸ್ ವಿರುದ್ಧ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ‘ಬಿಜೆಪಿಯಿಂದ ಮಾತ್ರ ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ನೀಡಲು ಸಾಧ್ಯ. ಮುಳುಗಡೆ ಹಂತದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಏನೂ ಮಾಡಲಾಗದು’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಟೀಕಿಸಿದರು. 

ಪಟ್ಟಣದ ಆರ್.ಆರ್. ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸೇವಕ ಸಮಾವೇಶದಲ್ಲಿ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿ, 6 ದಶಕದ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಯಾವುದೇ ಗುರುತರ ಬದಲಾವಣೆ ಮಾಡಿಲ್ಲ ಎಂದು ಆರೋಪಿಸಿದರು.

ರಾಷ್ಟ್ರದ ಅಭಿವೃದ್ಧಿ ಹಾಗೂ ಪ್ರಜೆಗಳು ಸಮೃದ್ಧ ಜೀವನಕ್ಕೆ ಅನುವು ಮಾಡಿಕೊಡಲು ಬಿಜೆಪಿ ದೂರದೃಷ್ಟಿ ಯೋಜನೆಗಳನ್ನು ರೂಪಿಸಿದೆ. ಪ್ರಧಾನಿ ಮೋದಿ ಅವರು ಜಾರಿ ಮಾಡಿರುವ ಯೋಜನೆಗಳ ಬಗ್ಗೆ ಜನರಿಗೆ ಅರಿವಿದೆ. ಸಾಮಾನ್ಯ ರೈತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಮೋದಿ ಅವರು ವಿಡಿಯೊ ಸಂವಾದ ನಡೆಸಿ ಸಮಸ್ಯೆ ಆಲಿಸಿರುವುದು ಇತಿಹಾಸ ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಸದಸ್ಯರಾಗಿ ಗೆದ್ದಿದ್ದಾರೋ ಅದೇ ರೀತಿ ದೆಹಲಿಯಲ್ಲಿಯೂ ಬಿಜೆಪಿ ಶಾಸಕರು ಗೆಲ್ಲಲಿದ್ದಾರೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ಮೋದಿ ನನಸು ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಬೇಕಿದೆ. ಉತ್ತಮ ಆಡಳಿತ ನೀಡುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.

ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಆರು ದಶಕದಲ್ಲಿ ಮಾಡಲಾಗದ ಕೆಲಸವನ್ನು ಬಿಜೆಪಿ ಆರು ವರ್ಷದಲ್ಲಿ ಮಾಡಿ ತೋರಿಸಿದೆ. ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರೇ ಅಧಿಕವಾಗಿ ಆಯ್ಕೆಯಾಗಿದ್ದಾರೆ. ಆದರೆ ವಿರೋಧ ಪಕ್ಷದ ಶಾಸಕರು ಯಾರದ್ದೋ ಮಗುವಿಗೆ ತಾವೇ ತಂದೆ ಎಂದು ಹೇಳಿಕೊಳ್ಳುತ್ತಾ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಕುದುರೆ ವ್ಯಾಪಾರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ, ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ನಾಗೇಶ್, ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ವೈ. ಸಂಪಂಗಿ, ಬಿ.ವಿ. ಮಹೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.