ಮಂಗಳವಾರ, ಅಕ್ಟೋಬರ್ 22, 2019
26 °C
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಸೂಚನೆ

ಜನವಿಕಾಸ್‌ ಯೋಜನೆ: ಸೌಲಭ್ಯ ತಲುಪಿಸಿ

Published:
Updated:
Prajavani

ಕೋಲಾರ: ‘ಪ್ರಧಾನಮಂತ್ರಿ ಜನವಿಕಾಸ್‌ ಕಾರ್ಯಕ್ರಮದ ಯೋಜನೆಗಳನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ತಿಳಿಸಿ ಅವುಗಳ ಪ್ರಯೋಜನ ಪಡೆಯುವಂತೆ ಮಾಡಿ’ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಶುಕ್ರವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ಜನವಿಕಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ತಲುಪಿಸಿ’ ಎಂದು ತಿಳಿಸಿದರು.

‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಡೆಸುತ್ತಿರುವ ಶಾಲಾ ಕಾಲೇಜುಗಳಿಗೆ ಅಗತ್ಯವಿರುವ ಕಾಂಪೌಂಡ್, ಮೈದಾನ, ಸ್ಮಾರ್ಟ್ ತರಗತಿ ಸೇರಿದಂತೆ ವಿವಿಧ ಸೌಕರ್ಯ ಪಡೆಯಲು ಅವಕಾಶವಿದೆ. ಜಿಲ್ಲೆಯ ಅಗತ್ಯತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದರೆ ಪರಿಶೀಲಿಸಿ ಅನುದಾನ ಬಿಡುಗಡೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಗೆ ಈಗಾಗಲೇ ₹ 30 ಕೋಟಿ ಯೋಜನೆ ಮಂಜೂರಾಗಿದ್ದು, ₹ 2.60 ಕೋಟಿ ಅನುದಾನದಲ್ಲಿ ಎರಡು ಕಾಮಗಾರಿ ನಡೆಸಲಾಗುತ್ತಿದೆ. ಕೋಲಾರಕ್ಕೆ ಅಲ್ಪಸಂಖ್ಯಾತರಿಗೆ ವಸತಿ ಪ್ರೌಢ ಶಾಲೆ ಮತ್ತು ಹೆಣ್ಣು ಮಕ್ಕಳಿಗೆ ವಸತಿ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ಮುಳಬಾಗಿಲಿಗೆ ವಸತಿ ಪ್ರೌಢ ಶಾಲೆ ಮಂಜುರಾಗಿದೆ. ಎರಡೂ ಕಡೆ ಪ್ರೌಢ ಶಾಲೆ ಕಾಮಗಾರಿ ನಡೆಯುತ್ತಿದ್ದು, ಕೋಲಾರದಲ್ಲಿ ವಸತಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಜಮೀನು ನೀಡಬೇಕಿದೆ’ ಎಂದು ವಿವರಿಸಿದರು.

‘ಶೇ 25ಕ್ಕೂ ಹೆಚ್ಚು ಅಲ್ಪಸಂಖ್ಯಾತರಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಅವಶ್ಯಕವಾದ ಸೌಲಭ್ಯಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿದ್ಧಪಡಿಸಬೇಕು. ನಂತರ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಮೂಲಕ ಕೇಂದ್ರಕ್ಕೆ ತಲುಪಿಸಬೇಕು. ಪ್ರಧಾನಮಂತ್ರಿ ಜನವಿಕಾಸ್‌ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ಸಲಹೆ ನೀಡಿದರು.

ಉದ್ಯೋಗ ತರಬೇತಿ: ‘ಅಲ್ಪಸಂಖ್ಯಾತ ಸಮುದಾಯದ ಯುವಕ ಯುವತಿಯರಿಗೆ ಉದ್ಯೋಗ ಆಧಾರಿತ ತರಬೇತಿ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮನವಿ ಮಾಡಿದರು.

‘ಅಲ್ಪಸಂಖ್ಯಾತ ಸಮುದಾಯದವರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಯೋಜನೆ, ಸವಲತ್ತು, ಅನುದಾನವನ್ನು ಅಧಿಕಾರಿಗಳು ಅರ್ಹರಿಗೆ ತಲುಪಿಸಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

‘ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಜಿಲ್ಲೆಗೆ 3 ವಸತಿ ಶಾಲೆ ಮಂಜೂರು ಮಾಡಲಾಗಿದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಮಹಮದ್‌ ಸುಜಿತಾ ಹಾಜರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)