ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕ್ಸ್‌ ಮೂಲಕ ಜನೌಷಧ ಮಾರಾಟ

17ಕ್ಕೆ ಸಭೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಘೋಷಣೆ
Last Updated 6 ಮಾರ್ಚ್ 2021, 13:05 IST
ಅಕ್ಷರ ಗಾತ್ರ

ಕೋಲಾರ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಮೂಲಕ ಜನರಿಕ್ ಔಷಧ ಮಾರಾಟಕ್ಕೆ ರಾಜ್ಯ ಸಹಕಾರ ಮಹಾಮಂಡಳ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಈ ಯೋಜನೆ ಜಾರಿಗೊಳಿಸುವ ಸಂಬಂಧ ಮಾರ್ಚ್‌ 17ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಮೈಕ್ರೊ ಎಟಿಎಂ ತಂತ್ರಾಂಶ ನಿರ್ವಹಣೆ ಸಂಬಂಧ ಜಿಲ್ಲೆಯ ಪ್ಯಾಕ್ಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮಾರ್ಚ್‌ 17ರ ಸಭೆಯಲ್ಲಿ ಸಹಕಾರ ಸಚಿವ ಸೋಮಶೇಖರ್ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ರಾಜೀವ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಾರೆ’ ಎಂದರು.

‘ಪ್ಯಾಕ್ಸ್‌ಗಳು ಬಂಡಾವಾಳ ಹಾಕುವಂತಿಲ್ಲ. ಮಹಾಮಂಡಳವು ಪೂರೈಸುವ ಜನರಿಕ್‌ ಔಷಧಗಳನ್ನು ಜನರಿಗೆ ಮಾರಾಟ ಮಾಡಿದರೆ ಶೇ 30ರಷ್ಟು ಲಾಭ ಸಿಗುತ್ತದೆ. ಜನೌಷಧ ಮಳಿಗೆ ಆರಂಭಕ್ಕೂ ಮುನ್ನ ಅವಿಭಜಿತ ಕೋಲಾರ ಜಿಲ್ಲೆಯ 200 ಪ್ಯಾಕ್ಸ್‌ಗಳ ಲೆಕ್ಕಪರಿಶೋಧನೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

‘ಮೈಕ್ರೊ ಎಟಿಎಂ ಹಾಗೂ ಸಂಚಾರ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಅವಿಭಜಿತ ಜಿಲ್ಲೆಯ ಕಟ್ಟಕಡೆಯ ಮನೆಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವ ಸಂಕಲ್ಪ ಮಾಡಿದ್ದೇವೆ. ಮೈಕ್ರೊ ಎಟಿಎಂ ಮೂಲಕ ಪಾರದರ್ಶಕ ವಹಿವಾಟು ಸಾಧ್ಯ. ಇದರಿಂದ ಗ್ರಾಹಕರಲ್ಲಿ ಬ್ಯಾಂಕ್ ಮತ್ತು ಸೊಸೈಟಿ ಬಗ್ಗೆ ನಂಬಿಕೆ ಬಲಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಗಣಕೀಕರಣ ಪೂರಕ: ‘ದೇಶದಲ್ಲಿ ಪ್ರತಿನಿತ್ಯ ಹೊಸ ಆವಿಷ್ಕಾರ ಆಗುತ್ತಿರುತ್ತವೆ. ಇದಕ್ಕೆ ಪೂರಕವಾಗಿ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾಗುವುದು ಅನಿವಾರ್ಯ. ಪಾರದರ್ಶಕ ಆಡಳಿತಕ್ಕೆ ಗಣಕೀಕರಣ ಪೂರಕ. ಗಣಕೀಕರಣ, ಎಟಿಎಂ ಮೂಲಕವೇ ಹಣದ ವಹಿವಾಟು ನಡೆಸಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೆಲಸಕ್ಕೆ ನ್ಯಾಯ ಒದಗಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗಿ’ ಎಂದು ಗುಡುಗಿದರು.

‘ಸಹಕಾರ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಆತ್ಮತೃಪ್ತಿ ಕಾಣಬೇಕು. ಬ್ಯಾಂಕ್‌ನ ಆಧಾರಸ್ತಂಭದಂತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು’ ಎಂದು ಕಿವಿಮಾತು ಹೇಳಿದರು.

₹ 500 ಕೋಟಿ ಠೇವಣಿ: ‘ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸಿರುವ ದೇಶದ ಮೊದಲ ಬ್ಯಾಂಕ್ ನಮ್ಮದು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಸಂತಸ ವ್ಯಕ್ತಪಡಿಸಿದರು.

‘ಡಿಸಿಸಿ ಬ್ಯಾಂಕ್ ಮತ್ತು ಸೊಸೈಟಿಗಳು ಹಿಂದೆ ಪಡಿತರ ಹಾಗೂ ಗೊಬ್ಬರ ಮಾರಾಟಕ್ಕೆ ಮಾತ್ರ ಸೀಮಿತವಾಗಿದ್ದವು. ಈಗ ಬ್ಯಾಂಕ್‌ 7 ಲಕ್ಷ ಮಹಿಳೆಯರು, ರೈತರಿಗೆ ಸಾಲ ನೀಡುವ ಶಕ್ತಿ ಪಡೆದಿದೆ. ಮಾರ್ಚ್‌ ಅಂತ್ಯದೊಳಗೆ ₹ 500 ಕೋಟಿ ಠೇವಣಿ ಸಂಗ್ರಹಿಸಬೇಕು’ ಎಂದು ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್ ಸೂಚಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಎಸ್.ವಿ.ಗೋವರ್ದನರೆಡ್ಡಿ, ನಿರ್ದೇಶಕರಾದ ರುದ್ರಸ್ವಾಮಿ, ಬಿ.ರಮೇಶ್, ಎನ್.ಶಂಕರನಾರಾಯಣಗೌಡ, ಎನ್.ನಾಗರಾಜ್, ವಿ.ರಘುಪತಿರೆಡ್ಡಿ, ಪಿ.ಎಂ.ವೆಂಕಟೇಶ್, ಟಿ.ಕೆ.ಬೈರೇಗೌಡ, ಕೆ.ಎಂ.ಮಂಜುನಾಥ್, ಆರ್.ಅರುಣಾ, ಎನ್.ವೆಂಕಟೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT