ಜಂತುಹುಳು ಮಾತ್ರೆ ಸೇವನೆ: ದುಷ್ಪರಿಣಾಮವಿಲ್ಲ

7
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯ್‌ಕುಮಾರ್‌ ಹೇಳಿಕೆ

ಜಂತುಹುಳು ಮಾತ್ರೆ ಸೇವನೆ: ದುಷ್ಪರಿಣಾಮವಿಲ್ಲ

Published:
Updated:
Deccan Herald

ಕೋಲಾರ: ‘ಜಂತುಹುಳು ನಾಶಕ ಮಾತ್ರೆ ಸೇವನೆಯಿಂದ ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಹೇಳಿದರು.

ಜಿಲ್ಲಾಡಳಿತವು ಇಲ್ಲಿನ ಕೀಲುಕೋಟೆ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆಯಲ್ಲಿ ಮಾತನಾಡಿ, ‘ಪೋಷಕರು ವದಂತಿಗೆ ಕಿವಿಗೂಟ್ಟು ಮಕ್ಕಳಿಗೆ ಮಾತ್ರೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪೋಷಕರಲ್ಲಿ ಅರಿವು ಮೂಡಿಸಿ ಭಯ ದೂರ ಮಾಡಬೇಕು’ ಎಂದರು.

‘ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ. ಜಂತುಹುಳುಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ನಿಶಕ್ತಿ, ಹೊಟ್ಟೆ ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜತೆಗೆ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಈ ಸಂಗತಿ ಮನಗಂಡು ಸರ್ಕಾರ ವರ್ಷಕ್ಕೆ ಎರಡು ಬಾರಿ ಫೆ.10 ಮತ್ತು ಆ.10ರಂದು 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಾಶಕ ಮಾತ್ರೆ ವಿತರಿಸುತ್ತಿದೆ’ ಎಂದರು.

‘ಸರ್ಕಾರಿ ಶಾಲೆಗಳ ಜತೆಗೆ ಅನುದಾನಿತ ಹಾಗೂ ಖಾಸಗಿ ಶಾಲೆ, ಐಟಿಐ, ಡಿಪ್ಲೊಮಾ, ಕಾಲೇಜುಗಳಿಗೂ ಮಾತ್ರೆ ವಿತರಣೆ ಕಾರ್ಯಕ್ರಮ ವಿಸ್ತರಿಸಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಿದೆ. ಮಕ್ಕಳು ತಪ್ಪದೆ ಮಾತ್ರೆ ಸೇವಿಸಿದರೆ ಆರೋಗ್ಯವಂತರಾಗಿ ಬೆಳೆಯುತ್ತಾರೆ’ ಎಂದು ಕಿವಿಮಾತು ಹೇಳಿದರು.

2015ರಿಂದ ಆಚರಣೆ: ‘2015ರಿಂದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ 3,76,522 ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ನೀಡಲಾಗುವುದು. ಈ ದಿನ ತಪ್ಪಿಸಿಕೊಂಡ ಮಕ್ಕಳಿಗೆ ಆ.17ರಂದು ಮಾತ್ರೆಗಳನ್ನು ಕೊಡುವಂತೆ ಶಿಕ್ಷಕರಿಗೆ ತಿಳಿಸಲಾಗಿದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್ ವಿವರಿಸಿದರು.

‘ಬಯಲು ಬಹಿರ್ದೆಸೆಯಿಂದಾಗಿ ಮಣ್ಣಿನಲ್ಲಿ ರೋಗಾಣು ಬೆರೆತಿರುತ್ತವೆ. ಆ ಭಾಗದಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಅಥವಾ ಬೇಯಿಸದೆ ಸೇವನೆ ಮಾಡಿದರೆ ಜಂತುಹುಳು ದೇಹ ಸೇರುತ್ತದೆ. ವೈಯಕ್ತಿಕ ಸ್ವಚ್ಛತೆ ಇಲ್ಲದಿದ್ದರೆ, ಚಪ್ಪಲಿ ಹಾಕದೆ ಬರಿಗಾಲಿನಲ್ಲಿ ನಡೆದರೆ ಜಂತುಹುಳು ದೇಹ ಸೇರುವ ಸಾಧ್ಯತೆ ಹೆಚ್ಚು. ಆದ ಕಾರಣ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಸಂತ್‌ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಶಾಲೆ ಮುಖ್ಯ ಶಿಕ್ಷಕ ಎಚ್.ಹನುಮಪ್ಪ, ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಪದ್ಮನಾಭ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !