ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕೆ ಧಕ್ಕೆ: ಅಧಿಕಾರಕ್ಕೆ ಬಂದರೆ ಮಟ್ಟ- ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್‌ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಕುಮಾರಸ್ವಾಮಿ ಘೋಷಣೆ
Last Updated 19 ಸೆಪ್ಟೆಂಬರ್ 2022, 4:40 IST
ಅಕ್ಷರ ಗಾತ್ರ

ಕೋಲಾರ:'ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ನೀಡಿದರೆ ಸಮಾಜದ ಸಾಮರಸ್ಯ ಹಾಗೂ ಭಾವೈಕ್ಯ ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ದೇಶ ಹಾಗೂ ರಾಜ್ಯಕ್ಕೆ ಬಂದೊದಗಿರುವ ಆಪತ್ತು ತೊಡೆದು ಹಾಕುತ್ತೇವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

‘ಹಿಜಾಬ್‌, ಹಲಾಲ್‌ ವಿಚಾರ ಇಟ್ಟುಕೊಂಡು ಬಿಜೆಪಿ ಮುಖಂಡರು ತೊಂದರೆ ಕೊಟ್ಟಿದ್ದಾರೆ. ಸೌಲಭ್ಯ ಕಿತ್ತುಕೊಂಡು ಮುಸ್ಲಿಮರನ್ನು ದೂರ ಸರಿಸುವ ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿ ರಾಜ್ಯದಾದ್ಯಂತ ಹಲವಾರು ವಿಚಾರ ಕೆದಕಿದರು. ಆಗ ನಾನು ಮುಸ್ಲಿಮರ ಬೆಂಬಲಕ್ಕೆ ನಿಂತು ಹೋರಾಟ ನಡೆಸಿದ್ದೇನೆ. ಸಿಎಎ ಸೇರಿದಂತೆ ಹಲವು ವಿಚಾರಗಳಲ್ಲಿ ಬೆಂಬಲಿಸಿದ್ದೇನೆ. ಮಂಗಳೂರಿನಲ್ಲಿ ಗಲಭೆ ನಡೆದಾಗ ಭೇಟಿ ನೀಡಿದ್ದೆ. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್‌ ಮುಖಂಡರೇ ಅಲ್ಲಿಗೆ ಹೋಗಲಿಲ್ಲ’ ಎಂದರು.

ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ‘ಕಾಂಗ್ರೆಸ್ಸಿಗರಿಗೆ ಚುನಾವಣೆ ಸಮಯದಲ್ಲಿ ಮಾತ್ರ ಮುಸ್ಲಿಮರು ನೆನಪಾಗುತ್ತಾರೆ. ಸಮಸ್ಯೆ ಬಂದಾಗ ನೆರವಿಗೆ ಹೋಗಲಿಲ್ಲ. ಸಿಎಎ ವಿಚಾರದಲ್ಲಿ ಹೆದರಿದರು. ಹಿಜಾಬ್, ಹಲಾಲ್ ವಿಚಾರದಲ್ಲಿ ಮಾತನಾಡಬೇಡಿ‌ ಎಂಬುದಾಗಿ ತಮ್ಮ ಪಕ್ಷದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಇಡೀ ಭಾರತದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ಕುಮಾರಸ್ವಾಮಿ ಮಾತ್ರ’ ಎಂದರು.

‘ಸಿದ್ದರಾಮಯ್ಯನವರೇ, ನಿಮಗೂ ಒಕ್ಕಲಿಗರಿಗೂ ಆಗಿಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮುಸ್ಲಿಮರು ಹಾಗೂ ಒಕ್ಕಲಿಗರ ನಡುವೆ ಏಕೆ ತಂದು ಹಾಕುತ್ತಿದ್ದೀರಿ' ಎಂದು ಪ್ರಶ್ನಿಸಿ ಮೈಸೂರು ಮೇಯರ್‌ ಚುನಾವಣೆಯಲ್ಲಿನ ಗೊಂದಲದ ಉದಾಹರಣೆ ನೀಡಿದರು.

ಸಮಾವೇಶದಲ್ಲಿ ಕೋಲಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ಸಂಭವನೀಯ ಅಭ್ಯರ್ಥಿಗಳು ಮಾತನಾಡಿದರು. ಆದರೆ, ಕೋಲಾರ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷೆಕುರ್ಕೆರಾಜೇಶ್ವರಿ ತಮಗೆ ಟಿಕೆಟ್‌ಸಿಗದು ಎಂಬ ಬೇಸರದಿಂದ ವೇದಿಕೆ ಮೇಲೆ ಕಣ್ಣೀರಿಟ್ಟರು. ಸಿ.ಎಂ.ಇಬ್ರಾಹಿಂ ಸಮಾಧಾನಪಡಿಸಿದರು.

ತಾಕತ್ತಿದ್ದರೆ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿ: ‘ಬಿಜೆಪಿ ಸಂಸದ ಮುನಿಸ್ವಾಮಿ ಅವರಿಗೆ ಕೋಲಾರದ ಬಗ್ಗೆ ಏನೂ ಗೊತ್ತಿಲ್ಲ. ಕ್ಲಾಕ್‌ ಟವರ್‌ ವಿಚಾರವಾಗಿ ಏನೇನೋ ಮಾತನಾಡುತ್ತಾರೆ. ದೇಶದ ಮೇಲೆ ನಮಗೂ ಪ್ರೀತಿ ಇದೆ. ಕ್ಲಾಕ್‌ ಟವರ್‌ ಮೇಲೆ ನಾವೇ ರಾಷ್ಟ್ರಧ್ವಜ ಹಾರಿಸುತ್ತೇವೆ. ತಾಕತ್ತಿದ್ದರೆ ನೀವು ನಾಗಪುರದ ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿ’ ಎಂದು ಅಂಜುಮಾನ್ ಸಂಸ್ಥೆ ಮುಖ್ಯಸ್ಥ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜಮೀರ್ ಅಹಮದ್ ಸವಾಲು ಎಸೆದರು.

ಆರೋಗ್ಯ ಸಚಿವ ರಾಜೀನಾಮೆ ನೀಡಲಿ: ‘ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ ರೋಗಿಗಳು ಏಕೆ ಸತ್ತರು ಎಂಬ ಸತ್ಯ ಹೇಳಲು ಈ ಕೆಟ್ಟ ಸರ್ಕಾರಕ್ಕೆ‌‌ ಇದುವರೆಗೆ ಸಾಧ್ಯವಾಗಿಲ್ಲ. ಮಾನ ಮರ್ಯಾದೆ, ನೈತಿಕತೆ ಇದ್ದರೆ ಇಷ್ಟರೊಳಗೆ ಆರೋಗ್ಯ ಸಚಿವ ರಾಜೀನಾಮೆ ಕೊಡಬೇಕಿತ್ತು. ಕೋವಿಡ್ ಸಮಯದಲ್ಲಿ ಆಮ್ಲಜನಕ ಕೊರತೆಯಿಂದ ಚಾಮರಾಜನಗರದಲ್ಲಿ 30 ಜನರ ಜೀವ ಹೋಯಿತು' ಎಂದು ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

‘ಸರಿಯಾಗಿ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಇವರಿಗೆ ಸಾಧ್ಯವಾಗಿಲ್ಲ. ಯಾವ ನಂಬಿಕೆ ಮೇಲೆ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಬರಬೇಕು’ ಎಂದು ಭಾನುವಾರ ಇಲ್ಲಿ ಪ್ರಶ್ನಿಸಿದರು.

‘ಶೇ 40 ಕಮಿಷನ್‌ಸಿಎಂಗೆಸ್ವಾಗತ ಎಂದು ತೆಲಂಗಾಣದಲ್ಲಿ ಬೋರ್ಡ್‌ ಹಾಕಿರುವುದು ರಾಜ್ಯ ಅಥವಾ ರಾಜ್ಯದ ಜನರಿಗೆ ಮಾಡಿರುವ ಅವಮಾನ ಅಲ್ಲ. ಬಿಜೆಪಿ ಸರ್ಕಾರ ಉದ್ದೇಶಿಸಿ ಹಾಕಿರುವುದು. ಸರ್ಕಾರ ನಡೆಸುವವರು ಇದಕ್ಕೆ ಉತ್ತರ ಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT