ಸೋಮವಾರ, ಡಿಸೆಂಬರ್ 5, 2022
21 °C
‘ಪಂಚರತ್ನ’–ಮುಳಬಾಗಿಲಿನಿಂದ ಪುನರಾರಂಭ

ಜೆಡಿಎಸ್‌ ಬೃಹತ್‌ ಸಮಾವೇಶ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್‌ ಪಕ್ಷದ ‍ಪಂಚರತ್ನ ಯಾತ್ರೆ ನ. 18ರಂದು (ಶುಕ್ರವಾರ) ಪುನರಾರಂಭವಾಗಲಿದ್ದು, ಅಂದು ಮುಳಬಾಗಿಲು ನಗರದಲ್ಲಿ ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸೇರಲಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ
ಹೇಳಿದರು.

‘ಮಧ್ಯಾಹ್ನ 1 ಗಂಟೆಗೆ ಬಾಲಾಜಿ ಭವನದ ಬಳಿಯ ಮೈದಾನದಲ್ಲಿ ಸಮಾವೇಶ ಆರಂಭವಾಗಲಿದೆ. ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಯಾತ್ರೆಯು 19ರಂದು ಬಂಗಾರಪೇಟೆ, 20ರಂದು ಮಾಲೂರು, 21ರಂದು ಕೋಲಾರ ಹಾಗೂ 22ರಂದು ಶ್ರೀನಿವಾಸಪುರಕ್ಕೆ ಸಾಗಲಿದೆ. ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಗೆ ತೆರಳಲಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ‘ಪಂಚರತ್ನ ಯಾತ್ರೆಯಲ್ಲಿ 11 ವಾಹನಗಳು ಇರಲಿವೆ. ಡಿಜಿಟಲ್ ಸೌಲಭ್ಯ ಇರುವ ವಾಹನದಲ್ಲಿ ಪಂಚರತ್ನ ಯೋಜನೆಯ ಪ್ರಾತ್ಯಕ್ಷಿಕೆ ನಡೆಯಲಿದೆ’ ಎಂದರು.

‘ಕೋಲಾರ ಕ್ಷೇತ್ರವು ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಸಿದ್ದರಾಮಯ್ಯ ಸ್ವರ್ಧಿಸಿದರೂ ನಮ್ಮಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಸೂಕ್ತ ಕಾಲದಲ್ಲಿ ಕುಮಾರಸ್ವಾಮಿ ನಿರ್ಧಾರ ಕೈಗೊಳ್ಳುತ್ತಾರೆ. ಘಟಬಂಧನ್‌ ಸದಸ್ಯರು ಸಿದ್ದರಾಮಯ್ಯ ಅವರನ್ನು ಚುನಾವಣೆಗೆ ನಿಲ್ಲಿಸಿ ಬಲಿ ಕೊಡಲು, ಖೆಡ್ಡಾ ತೋಡಿ ಸಿದ್ಧವಾಗಿಟ್ಟುಕೊಂಡಿದ್ದಾರೆ. ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದೆ ಅವರನ್ನು ಕರೆ ತರುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಕೋಲಾರ ಕ್ಷೇತ್ರದಲ್ಲಿ ಇದುವರೆಗೆ ಅಭಿವೃದ್ಧಿ ಆಗಿಲ್ಲ. ಯರಗೋಳ್ ಯೋಜನೆ ಜೆಡಿಎಸ್‌ನದ್ದು. ಬೇರೆ ಪಕ್ಷದವರು ಟೆಂಡರ್ ಗಿರಾಕಿಗಳು ಅಷ್ಟೆ’ ಎಂದರು.

‘ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ಅವರ ಜಾತಿ ಪ್ರಮಾಣ ವಿಚಾರ ಇತ್ಯರ್ಥವಾಗದಿದ್ದರೂ ಟಿಕೆಟ್‌ಗೆ ಅರ್ಜಿ ಹಾಕಿಸಿಕೊಂಡಿದ್ದಾರೆ. ಶ್ರೀನಿವಾಸಪುರ ಕ್ಷೇತ್ರವನ್ನು ಬಿಟ್ಟು ಕೊಡುತ್ತಾರೆಯೇ? ಯಾವ ರೀತಿ ನ್ಯಾಯ‌ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ, ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹ್ಮದ್‌ ಮಾತನಾಡಿ, ‘ಹಿಜಾಬ್‌, ಹಲಾಲ್ ಸೇರಿದಂತೆ ಹಲವು ವಿವಾದ ಸೃಷ್ಟಿಯಾದಾಗ ಕಾಂಗ್ರೆಸ್‌ನ ಯಾರೂ ಮುಸ್ಲಿಮರ ನೆರವಿಗೆ ಬರಲಿಲ್ಲ. ಆದರೆ, ಕುಮಾರಸ್ವಾಮಿ ನಮ್ಮ ಪರ ಮಾತನಾಡಿದರು. ಕಾಂಗ್ರೆಸ್‌ನವರು ಐದು ವರ್ಷಗಳಿಗೊಮ್ಮೆ ಬಂದು ಮುಸ್ಲಿಮರನ್ನು ಮಾತ‌ನಾಡಿಸುತ್ತಾರೆ. ಇದೆಲ್ಲಾ ಈಗ ಅರ್ಥವಾಗುತ್ತಿದೆ. ಈ ಸಲ ಶೇ 40ರಷ್ಟು ಮುಸ್ಲಿಮರು ಜೆಡಿಎಸ್ ಕಡೆ ಇದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೂ ತೊಂದರೆ ಆಗಲ್ಲ’ ಎಂದರು.

ನ. 1ರಂದು ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ‘ಪಂಚರತ್ನ’ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಆದರೆ, ಮಳೆಯ ಕಾರಣ ಮುಂದೂಡಲಾಗಿತ್ತು. ನ. 14ರಂದು ಆಯೋಜಿಸಲು ನಿರ್ಧರಿಸಿದ್ದರೂ ಮಳೆಯ ಮುನ್ಸೂಚನೆ ಕಾರಣ ಮತ್ತೆ ಮುಂದೂಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ಸಿಎಂಆರ್ ಶ್ರೀನಾಥ್, ತಾಲ್ಲೂಕು ಅಧ್ಯಕ್ಷೆ ರಾಜರಾಜೇಶ್ವರಿ, ರಾಮೇಗೌಡ, ರಮೇಶ್‌ ಬಾಬು, ಬಣಕನಹಳ್ಳಿ ನಟರಾಜ್, ಮುಸ್ತಾಫ, ರಾಮು ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು