ಶನಿವಾರ, ಅಕ್ಟೋಬರ್ 8, 2022
21 °C

JDS ಅಲ್ಪಸಂಖ್ಯಾತರ ಸಮಾವೇಶ: ಸಾಮರಸ್ಯಕ್ಕೆ ಧಕ್ಕೆ- ಸಹಿಸುವುದಿಲ್ಲ ಎಂದ ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: 'ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ನೀಡಿದರೆ ಸಮಾಜದಲ್ಲಿನ ಸಾಮರಸ್ಯ ಹಾಗೂ ಭಾವೈಕ್ಯ  ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ದೇಶ ಹಾಗೂ ರಾಜ್ಯಕ್ಕೆ ಬಂದೊದಗಿರುವ ಆಪತ್ತು ತೊಡೆದು ಹಾಕುತ್ತೇವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಜೆಡಿಎಸ್‌ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶ ಉದ್ದೇಶಿ ಅವರು ಮಾತನಾಡಿದರು.

‘ಹಿಜಾಬ್‌, ಹಲಾಲ್‌ ವಿಚಾರ ಇಟ್ಟುಕೊಂಡು ಬಿಜೆಪಿ ಮುಖಂಡರು ತೊಂದರೆ ಕೊಟ್ಟಿದ್ದಾರೆ. ಸೌಲಭ್ಯ ಕಿತ್ತುಕೊಂಡು ಮುಸ್ಲಿಮರನ್ನು ದೂರ ಸರಿಸುವ ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿ ರಾಜ್ಯದಾದ್ಯಂತ ಹಲವಾರು ವಿಚಾರ ಕೆದಕಿದರು. ಆಗ ನಾನು ಮುಸ್ಲಿಮರ ಬೆಂಬಲಕ್ಕೆ ನಿಂತು ಹೋರಾಟ ನಡೆಸಿದ್ದೇನೆ. ಸಿಎಎ ಸೇರಿದಂತೆ ಹಲವು ವಿಚಾರಗಳಲ್ಲಿ ಬೆಂಬಲಿಸಿದ್ದೇನೆ. ಮಂಗಳೂರಿನಲ್ಲಿ ಗಲಭೆ ನಡೆದಾಗ ಭೇಟಿ ನೀಡಿದ್ದೆ. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್‌ ಮುಖಂಡರೇ ಅಲ್ಲಿಗೆ ಹೋಗಲಿಲ್ಲ’ ಎಂದರು.

‘ನಗರದ ಕ್ಲಾಕ್‌ ಟವರ್‌ ವಿಚಾರದಲ್ಲಿ ಕೋಲಾರದ ಬಿಜೆಪಿ ಸಂಸದ ರಾಜಕೀಯ ಮಾಡುತ್ತಿದ್ದಾರೆ.  ಈ ವಿಚಾರದಲ್ಲಿ ಸಂಘರ್ಷ‌ ತಡೆದಿದ್ದು ಅಂಜುಮಾನ್ ಸಂಸ್ಥೆ ಹಾಗೂ ಮುಸ್ಲಿಮರು’ ಎಂದು ಹೇಳಿದರು.

‘ಮುಸ್ಲಿಮರ ಎಲ್ಲಾ ಬೇಡಿಕೆ ಈಡೇರಿಸುವ ಸಮಯ ಬರಲಿದೆ‌. 123 ಸ್ಥಾನದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಅದಕ್ಕೆ ಅಲ್ಪಸಂಖ್ಯಾತರ ಸಹಕಾರ ಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ‘ಕಾಂಗ್ರೆಸ್ಸಿಗರಿಗೆ ಚುನಾವಣೆ ಸಮಯದಲ್ಲಿ ಮಾತ್ರ ಮುಸ್ಲಿಮರು ನೆನಪಾಗುತ್ತಾರೆ. ಸಮಸ್ಯೆ ಬಂದಾಗ ನೆರವಿಗೆ ಹೋಗಲಿಲ್ಲ. ಸಿಎಎ ವಿಚಾರದಲ್ಲಿ ಹೆದರಿದರು. ಹಿಜಾಬ್, ಹಲಾಲ್ ವಿಚಾರದಲ್ಲಿ ಮಾತನಾಡಬೇಡಿ‌ ಎಂಬುದಾಗಿ ತಮ್ಮ ಪಕ್ಷದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಇಡೀ ಭಾರತದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ಕುಮಾರಸ್ವಾಮಿ ಮಾತ್ರ’ ಎಂದರು.

‘ಸಿದ್ದರಾಮಯ್ಯನವರೇ, ನಿಮಗೂ ಒಕ್ಕಲಿಗರಿಗೂ ಆಗಿಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮುಸ್ಲಿಮರು ಹಾಗೂ ಒಕ್ಕಲಿಗರ ನಡುವೆ ಏಕೆ ತಂದು ಹಾಕುತ್ತಿದ್ದೀರಿ' ಎಂದು ಪ್ರಶ್ನಿಸಿ ಮೈಸೂರು ಮೇಯರ್‌ ಚುನಾವಣೆಯಲ್ಲಿನ ಗೊಂದಲದ ಉದಾಹರಣೆ ನೀಡಿದರು.

–––

‘ತಾಕತ್ತಿದ್ದರೆ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿ’

‘ಬಿಜೆಪಿ ಸಂಸದ ಮುನಿಸ್ವಾಮಿ ಅವರಿಗೆ ಕೋಲಾರದ ಬಗ್ಗೆ ಏನೂ ಗೊತ್ತಿಲ್ಲ. ಕ್ಲಾಕ್‌ ಟವರ್‌  ವಿಚಾರವಾಗಿ ಏನೇನೋ ಮಾತನಾಡುತ್ತಾರೆ. ದೇಶದ ಮೇಲೆ ನಮಗೂ ಪ್ರೀತಿ ಇದೆ. ಕ್ಲಾಕ್‌ ಟವರ್‌  ಮೇಲೆ ನಾವೇ ರಾಷ್ಟ್ರಧ್ವಜ ಹಾರಿಸುತ್ತೇವೆ. ತಾಕತ್ತಿದ್ದರೆ ನೀವು ನಾಗಪುರದ ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿ’ ಎಂದು ಅಂಜುಮಾನ್ ಸಂಸ್ಥೆ ಮುಖ್ಯಸ್ಥ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜಮೀರ್ ಅಹಮದ್ ಸಮಾವೇಶದಲ್ಲಿ ಸವಾಲು ಎಸೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು