ಕೋಲಾರ: ಮುನಿಯಪ್ಪ ಮಣಿಸಲು ಜೆಡಿಎಸ್‌ ರಣತಂತ್ರ

ಗುರುವಾರ , ಮಾರ್ಚ್ 21, 2019
32 °C
ಶ್ರೀನಿವಾಸಗೌಡರ ಮನೆಯಲ್ಲಿ ಪಕ್ಷದ ಹಾಲಿ– ಮಾಜಿ ಶಾಸಕರ ರಹಸ್ಯ ಸಭೆ

ಕೋಲಾರ: ಮುನಿಯಪ್ಪ ಮಣಿಸಲು ಜೆಡಿಎಸ್‌ ರಣತಂತ್ರ

Published:
Updated:
Prajavani

ಕೋಲಾರ: ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಲು ಜೆಡಿಎಸ್ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು ಒಗ್ಗೂಡಿ ರಣತಂತ್ರ ರೂಪಿಸಿಲಾರಂಭಿಸಿದ್ದಾರೆ.

ಇಲ್ಲಿನ ಶಾಸಕ ಕೆ.ಶ್ರೀನಿವಾಸಗೌಡರ ನಿವಾಸದಲ್ಲಿ ಶುಕ್ರವಾರ ರಹಸ್ಯ ಸಭೆ ನಡೆಸಿದ ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ಕೆ.ಎಸ್.ಮಂಜುನಾಥಗೌಡ, ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡಿರುವ ಸಮೃದ್ಧಿ ಮಂಜುನಾಥ್, ಕೋಚಿಮುಲ್ ಮಾಜಿ ನಿರ್ದೇಶಕ ನಾಗರಾಜ್ ಲೋಕಸಭೆ ಚುನಾವಣೆ ವಿಚಾರವಾಗಿ ಗಹನ ಚರ್ಚೆ ನಡೆಸಿದರು.

ಕೋಲಾರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಖಚಿತ. ಹೀಗಾಗಿ ಪಕ್ಷದ ವರಿಷ್ಠರ ಮೇಲೆ ಒತ್ತಡ ತಂದು ಅಭ್ಯರ್ಥಿ ಘೋಷಿಸುವಂತೆ ಮಾಡಬೇಕೆಂದು ಮುಖಂಡರು ನಿರ್ಧರಿಸಿದರು ಎಂದು ಗೊತ್ತಾಗಿದೆ.

ಕ್ಷೇತ್ರದಲ್ಲಿ 7 ಬಾರಿಯಿಂದ ಮುನಿಯಪ್ಪ ಅವರೊಬ್ಬರೇ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಬ್ಬ ಶಾಸಕ ಮಾತ್ರ ಮುನಿಯಪ್ಪ ಪರ ಇದ್ದಾರೆ. ಉಳಿದವರು ಪರ್ಯಾಯ ನಾಯಕನ ಹುಡುಕಾಟದಲ್ಲಿದ್ದು, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದರೆ ಗೆಲವು ಖಚಿತ ಎಂದು ನಾಯಕರು ಪರಸ್ಪರ ಚರ್ಚಿಸಿದರು.

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯು ಮುನಿಯಪ್ಪ ಅವರೆದುರು ಅಲ್ಪ ಮತಗಳ ಅಂತರದಿಂದ ಪರಾಭಾವಗೊಂಡರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷಕ್ಕೆ ಮತ ಬಂದಿವೆ. ಆದರೆ, ಕೆಜಿಎಫ್‌ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಕಾರಣ ಅಭ್ಯರ್ಥಿ ಸೋಲಬೇಕಾಯಿತು. ಆದರೆ, ಈ ಬಾರಿ ಆ ಪರಿಸ್ಥಿತಿಯಿಲ್ಲ ಎಂದು ಮುಖಂಡರು ಮಾತುಕತೆ ನಡೆಸಿದರು.

ಬದಲಾವಣೆ ಬಯಸಿದ್ದಾರೆ: ‘ಕ್ಷೇತ್ರದ ಜನ ರಾಜಕೀಯ ಬದಲಾವಣೆ ಬಯಸುತ್ತಿದ್ದು, ಜೆಡಿಎಸ್ ಪರ ಹೆಚ್ಚು ಒಲವು ತೋರುತ್ತಿದ್ದಾರೆ. ಹೀಗಾಗಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಮತ್ತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು’ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಸಲಹೆ ನೀಡಿದರು.

‘ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ, ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕುವ ಅನಿವಾರ್ಯವಿದೆ’ ಎಂದು ಹೇಳಿದರು.

ಗೆಲುವಿಗೆ ಶ್ರಮಿಸೋಣ: ‘ರಾಜ್ಯದಲ್ಲಿ ಪಕ್ಷದ 37 ಶಾಸಕರಿದ್ದರೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರವಾದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನೇ ಘೋಷಿಸಬೇಕು. ಆಗ ಮಾತ್ರ ಜೆಡಿಎಸ್‌ ಹೆಚ್ಚು ಸ್ಥಾನ ಬರುತ್ತವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಜೆಡಿಎಸ್‌ ಮುಖಂಡರಾದ ರಾಜೇಂದ್ರ, ಶ್ರೀಕೃಷ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !