ಬುಧವಾರ, ನವೆಂಬರ್ 13, 2019
23 °C

ಜೆಡಿಯು ಪಕ್ಷ ಸಂಘಟನೆಗೆ ಒತ್ತು

Published:
Updated:

ಕೋಲಾರ: ‘ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಯು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ‍ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೋಲಾರ, ಕೆಜಿಎಫ್, ಚಿಂತಾಮಣಿಯಲ್ಲಿ ತಲಾ 1 ಹಾಗೂ ಮಂಗಳೂರಿನಲ್ಲಿ 2 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಇವರ ಗೆಲುವಿನಿಂದಲೇ ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು’ ಎಂದರು. 

‘ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕೋಟಿಗಟ್ಟಲೆ ಹಣ ತಂದು ನಂತರ ಹಣ ಗಳಿಸುವ ಕೆಲಸ ನಡೆಯುತ್ತಿದೆ. ಹಣದ ಮೇಲೆ ನಡೆಯುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನ ನಡೆಯುತ್ತಿದೆ. ಇದನ್ನು ಕಂಡು ವ್ಯವಸ್ಥೆ ಸರಿಯಿಲ್ಲ ಎನ್ನುತ್ತಾರೆ. ಪ್ರಜ್ಞಾವಂತಿಕೆಯ ರಾಜಕಾರಣಕ್ಕೆ ಮುಂದಾಗಿದ್ದವೆ’ ಎಂದು ಹೇಳಿದರು.

‘ಜೈಲಿಗೆ ಹೋಗಿ ಬಂದವರಿಗೆ ಸಿಗುತ್ತಿರುವ ಮರ್ಯಾದೆ ಒಳ್ಳೆಯವರಿಗೆ ಇಲ್ಲ. ರಾಜ್ಯದಾದ್ಯಂತ ವಿವಿಧ ಪಕ್ಷಗಳಲ್ಲಿ ಸಜ್ಜನ ಮುಖಂಡರು ಅಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅವರೆಲ್ಲರನ್ನು ಸಂಪರ್ಕಿಸಿ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವ ಕೆಲಸ ಮಾಡುತ್ತೇವೆ’ ಎಂದರು.

‘ದೇಶದಲ್ಲಿ ಇಂದು ರಾಕ್ಷಸ ಆರ್ಥಿಕತೆ ಇದೆ, ಇದರ ಬದಲು ಪವಿತ್ರ ಆರ್ಥಿಕತೆಗೆ ಗಮನ ನೀಡಬೇಕು. ಪಕ್ಷವು ಸಾವಯವ, ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡುತ್ತದೆ. ರಾಜ್ಯದಲ್ಲಿ 1 ಕೋಟಿ ಜನ ಉದ್ಯೋಗ ಕೇಳೆದುಕೊಂಡಿದ್ಳುದಾರೆ. ಉದ್ಯೋಗ ನೀಡಲು ಕೈಗಾರಿಕೆಗಳು ಕಡಿಮೆಯಾಗುತ್ತಿವೆ, ಆಯಾ ಭಾಗದಲ್ಲಿ ನೂರು ಕಿಮೀ ವ್ಯಾಪ್ತಿಯಲ್ಲಿ ಸಿಗುವ ಉತ್ಪತ್ತಿಗಳನ್ನು ಆಧರಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.

‘ಬಿಹಾರದಲ್ಲಿ ಮಹಿಳೆಯೊಬ್ಬರ ಮದ್ಯ ನಿಷೇಧದ ಕೂಗಿದೆ ಸ್ಪಂದಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಿದರು. ಅದೇ ರೀತಿ ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಪಕ್ಷದ ಸಂಪೂರ್ಣ ಬೆಂಬಲ ಇದೆ. ದಲಿತ ಮಹಿಳೆಯರನ್ನು ಮುಖ್ಯಮಂತ್ರಿ ಮಾಡುವ ಚಿಂತನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

‘ಬಿಹಾರ ರಾಜ್ಯದಲ್ಲಿ ನಿತೀಶ್‍ಕುಮಾರ್ ಮುಖ್ಯಮಂತ್ರಿಯಾಗಿ 50 ವರ್ಷಗಳಷ್ಟು ಹಿಂದುಳಿದಿದ್ದ ರಾಜ್ಯವನ್ನು ಕಳೆದ 15 ವರ್ಷಗಳಲ್ಲಿ ಮುಂಚೂಣಿಗೆ ತಂದಿದ್ದಾರೆ. ಆ ರಾಜ್ಯದ ಜಿಡಿಪಿ ಶೇ. 11.4ರಷ್ಟಿದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲೂ ಪಕ್ಷ ಕಟ್ಟಲು ತಯಾರಾಗಿದ್ದೇವೆ’ ಎಂದು ತಿಳಿಸಿದರು.

‘ಸಮಾಜವಾದ ಹಿನ್ನೆಲೆಯಿಂದ ಆರಂಭವಾದ ಜೆಡಿಯು ಪಕ್ಷ ಸಂಘಟನೆಗೆ ಮುಂದಾಗಿದ್ದು, ಸಾತ್ವಿಕ ರಾಜಕಾರಣದತ್ತ ಗಮನ ಹರಿಸಿದ್ದೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಒಂದೆರಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಗೆದ್ದರೆ ನೈಸರ್ಗಿಕ, ಸಾವಯವ ರಾಜಕಾರಣದೊಂದಿಗೆ ಜನಪರ ಕೆಲಸ ಮಾಡಿ ಜನರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು ಎಂದರು.

ಜೆಡಿಯು ಯುವ ರಾಜ್ಯ ಘಟಕದ ಅಧ್ಯಕ್ಷ  ಡಾ.ನಾಗರಾಜ್, ಜೆಡಿಯು ರಾಜ್ಯ ಘಟಕದ ಕಾರ್ಯಾಧ್ಯಕ್ಷ ಜಿ.ವಿ. ರಾಮಚಂದ್ರಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ. ಶಿವರಾಂ, ದಾವುದ್ ಖಾನ್, ಡಾ. ಜಫ್ರುಲ್ಲಾ, ಜಮಾನುಲ್ಲಖಾನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕ್ತಿವೇಲು ಹಾಜರಿದ್ದರು.

ಪ್ರತಿಕ್ರಿಯಿಸಿ (+)