ಶನಿವಾರ, ಜನವರಿ 18, 2020
19 °C

ಫೆಬ್ರವರಿ 11ಕ್ಕೆ ಉದ್ಯೋಗ ಮೇಳ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಫೆ.11 ಮತ್ತು 12ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಉದ್ಯೋಗ ಮೇಳ ಆಯೋಜನೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಸಿ.ಬೈರೇಗೌಡ ತಾಂತ್ರಿಕ ವಿದ್ಯಾಲಯದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಮೇಳ ಆಯೋಜನೆ ಕುರಿತು ಶಿಷ್ಟಾಚಾರ, ವೇದಿಕೆ ಹಾಗೂ ವಿವಿಧ ಸಮಿತಿ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುವುದು’ ಎಂದು ಹೇಳಿದರು.

‘ಮೇಳ ನಿರ್ವಹಣೆಗೆ ಸೂಕ್ತ ಏಜೆನ್ಸಿ ಗುರುತಿಸಬೇಕು. ವೆಬ್‌ಸೈಟ್‌ ಸಂಬಂಧ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಕ್ರಮ ವಹಿಸಲಿದೆ. ಫೆ.5ರೊಳಗೆ ಉದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಕೈಗಾರಿಕಾ ಕಂಪನಿಗಳು ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವ ಆಸಕ್ತ ಕಂಪನಿಗಳ ಪಟ್ಟಿ ಸಿದ್ಧಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೌಶಲ್ಯಾಭಿವೃದ್ಧಿ ಇಲಾಖೆಯವರು ಜಿಲ್ಲೆಯ ವೇಮಗಲ್, ನರಸಾಪುರ, ಟಮಕ, ಬೆಂಗಳೂರಿನ ಹೊಸಕೋಟೆ ಮತ್ತು ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಗಳು ಸೇರಿದಂತೆ ರಾಜ್ಯ ಮಟ್ಟದ ಕಂಪನಿಗಳನ್ನು ಮೇಳಕ್ಕೆ ಆಹ್ವಾನಿಸಬೇಕು. ಮೇಳದಲ್ಲಿ ಕಂಪನಿಗಳ ಪ್ರತಿನಿಧಿಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾಭ್ಯಾಸ ಪೂರೈಸಿರುವವರು ಮೇಳದಲ್ಲಿ ಭಾಗವಹಿಸಬಹುದು. ಮೇಳಕ್ಕೆ ಬರುವವರಿಗೆ ಕೋಲಾದ ನಗರದಿಂದ ಸಿಬಿಐಟಿ ಕಾಲೇಜಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚನೆ ನೀಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮಪ್ಪ ಪೂಜಾರಿ, ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್, ಸಿಬಿಐಟಿ ಕಾಲೇಜು ಪ್ರಾಂಶುಪಾಲ ಶ್ರೀರಾಮ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು