ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

Last Updated 7 ಸೆಪ್ಟೆಂಬರ್ 2019, 12:07 IST
ಅಕ್ಷರ ಗಾತ್ರ

ಕೋಲಾರ: ‘ಲಂಚ ಕೊಡುವುದು ಹಾಗೂ ತೆಗೆದುಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ವಿದ್ಯಾವಂತರು ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕು’ ಎಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್‌ ಕಿವಿಮಾತು ಹೇಳಿದರು.

ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಎಸ್‌ಡಿಸಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕುರಿತ ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಭ್ರಷ್ಟಾಚಾರವು ದೊಡ್ಡ ಸಾಮಾಜಿಕ ಪಿಡುಗು’ ಎಂದು ಅಭಿಪ್ರಾಯಪಟ್ಟರು.

‘ಯುವಕ ಯುವತಿಯರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ ಬದಲಾವಣೆ ಮಾಡಬೇಕು. ಲಂಚ ಪಡೆಯುವ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಸರ್ಕಾರಿ ಕೆಲಸ ಮಾಡಲು ಹಿಂದೇಟು ಹಾಕುವುದು, ಲಂಚದ ಬೇಡಿಕೆ, ಅಕ್ರಮ ಸಂಪತ್ತು ಹೊಂದಿರುವವರ ಬಗ್ಗೆ ಎಸಿಬಿಗೆ ದೂರು ನೀಡಿ’ ಎಂದು ತಿಳಿಸಿದರು.

‘ಭ್ರಷ್ಟಾಚಾರದಲ್ಲಿ ಭಾರತವು ಜಾಗತಿಕವಾಗಿ 72ನೇ ಸ್ಥಾನದಲ್ಲಿದೆ. ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಇಲ್ಲದಿದ್ದರೆ ಸಮಾಜ ರೋಗಗ್ರಸ್ಥವಾಗುತ್ತದೆ ಮತ್ತು ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ’ ಎಂದು ಲೋಕಾಯುಕ್ತ ವಿಶೇಷ ಅಭಿಯೋಜಕ ಎನ್.ರಾಮಚಂದ್ರಯ್ಯ ಆತಂಕ ವ್ಯಕ್ತಪಡಿಸಿದರು.

ಜೈಲು ಶಿಕ್ಷೆ: ‘ಯುವಕ ಯುವತಿಯರು ಮನಸು ಮಾಡಿದರೆ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಬಹುದು. ಲಂಚಕ್ಕೆ ಉತ್ತೇಜನ ನೀಡುವುದು ಕಾನೂನು ಪ್ರಕಾರ ಅಪರಾಧ. ಇದರಲ್ಲಿ ಭಾಗಿಯಾದವರಿಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುತ್ತದೆ. ಜತೆಗೆ ಕೆಲಸದಿಂದ ವಜಾಗೊಳಿಸಬಹುದು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ನಾಗರೀಕತೆಯ ಆರಂಭದಿಂದಲೂ ಭ್ರಷ್ಟಾಚಾರವಿದೆ. ಆಡಳಿತ ವ್ಯವಸ್ಥೆ ಬದಲಾದಂತೆ ಭ್ರಷ್ಟಾಚಾರದ ಸ್ವರೂಪ ಸಹ ಬದಲಾಗುತ್ತದೆ’ ಎಂದು ಎಸಿಬಿ ಇನ್‌ಸ್ಪೆಕ್ಟರ್‌ ವೆಂಕಟಚಲಪತಿ ಹೇಳಿದರು.

ಎಸ್‌ಡಿಸಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಉಷಾ ಗಂಗಾಧರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವರಾಮ ಪಾಟೀಲ್, ಪದವಿ ಕಾಲೇಜು ಪ್ರಾಂಶುಪಾಲೆ ಪುಷ್ಪಲತಾ, ಉಪನ್ಯಾಸಕ ಸದಾಶಿವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT