ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಸಮುಕ್ತ ನಗರಕ್ಕೆ ಕೈಜೋಡಿಸಿ

ಜಾಥಾದಲ್ಲಿ ಸಾರ್ವಜನಿಕರಿಗೆ ನಗರಸಭೆ ಆಯುಕ್ತ ಶ್ರೀಕಾಂತ್ ಮನವಿ
Last Updated 4 ಮಾರ್ಚ್ 2020, 14:45 IST
ಅಕ್ಷರ ಗಾತ್ರ

ಕೋಲಾರ: ‘ನಗರವನ್ನು ಕಸಮುಕ್ತ ಸ್ವಚ್ಛ ನಗರವಾಗಿಸಲು ಸಾರ್ವಜನಿಕರು ನಗರಸಭೆ ಜತೆ ಕೈಜೋಡಿಸಬೇಕು’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಮನವಿ ಮಾಡಿದರು.

ಸ್ವಚ್ಛ ಭಾರತ್ ಮಿಷನ್ ಅಡಿ ನಗರಸಭೆ ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ನಗರವಾಸಿಗಳು ಮನೆಗಳಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಿ ಪೌರ ಕಾರ್ಮಿಕರಿಗೆ ವಿಲೇವಾರಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಗರದ ಸ್ವಚ್ಛತಾ ಕಾರ್ಯ ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯವಿಲ್ಲ. ಜನರು ಸಹಕಾರ ನೀಡಿದರೆ ಮಾತ್ರ ಸ್ವಚ್ಛತೆಯ ಗುರಿ ಸಾಧಿಸಲು ಸಾಧ್ಯ. ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶುದ್ಧ ಗಾಳಿಗಾಗಿ ರಸ್ತೆಗಳ ಅಕ್ಕಪಕ್ಕ ಗಿಡ ನೆಟ್ಟು ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರಗಳೇ ಸ್ವಚ್ಛ ಭಾರತ್ ಯೋಜನೆ ಜಾರಿಗೆ ತಂದಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಹೀಗಾಗಿ ಸರ್ಕಾರವೇ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿದೆ. ಬಟ್ಟೆ ಚೀಲ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು’ ಎಂದರು.

‘ಏಕ ಬಳಕೆಯ ಪ್ಲಾಸ್ಟಿಕ್ ಉಪಯೋಗವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಪ್ಲಾಸ್ಟಿಕ್ ಮಾರಾಟ ಅಥವಾ ಬಳಕೆ ಮಾಡಬಾರದು. ಇದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ಗ್ರಾಹಕರಿಗೆ ಬಟ್ಟೆ ಬ್ಯಾಗ್‌ ತರುವಂತೆ ಹೇಳಿ. ಇಲ್ಲವೇ ವರ್ತಕರೇ ಪರಿಸರಸ್ನೇಹಿ ಬ್ಯಾಗ್ ನೀಡಬೇಕು’ ಎಂದು ತಿಳಿಸಿದರು.

ಜೈಲು ಶಿಕ್ಷೆ: ‘ಪ್ಲಾಸ್ಟಿಕ್‌ ಕವರ್‌ ನಿರ್ಬಂಧದ ನಿಯಮ ಉಲ್ಲಂಘಿಸಿದರೆ ₹ 25 ಸಾವಿರದವರೆಗೆ ದಂಡ ಹಾಗೂ ಸುಪ್ರಿಂ ಕೋರ್ಟ್ ಆದೇಶದಂತೆ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಲು ನಗರದಲ್ಲಿ ಐಇಸಿ (ಇನ್‍ಫರ್ಮೆಷನ್, ಎಜುಕೇಷನ್ ಮತ್ತು ಕಮ್ಯೂನಿಕೇಷನ್‌) ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಪ್ರಮುಖ ರಸ್ತೆಗಳಲ್ಲಿ ಗೋಡೆ ಬರಹ ಬರೆಸಲಾಗಿದ್ದು, ಮತ್ತಷ್ಟು ಕಡೆಗೆ ವಿಸ್ತರಿಸುತ್ತೇವೆ. ಶೌಚಗೃಹ ಬಳಕೆ ಬಗ್ಗೆ ಬೀದಿ ನಾಟಕದ ಮೂಲಕ ಅರಿವು ಮೂಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಬದಲಾವಣೆ: ‘ಆರೋಗ್ಯಕ್ಕೆ ಸ್ವಚ್ಛತೆ ಮುಖ್ಯ. ಮನೆಯಲ್ಲೇ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಪೌರ ಕಾರ್ಮಿಕರಿಗೆ ನೀಡಿದರೆ ಕೆಲವೇ ತಿಂಗಳುಗಳಲ್ಲಿ ನಗರದಲ್ಲಿ ಬದಲಾವಣೆ ಕಾಣಬಹುದು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸ್ವಚ್ಛತೆಯ ಮಹತ್ವದ ಅರಿವು ಮೂಡಿಸಿದರೆ ಸುಂದರ ನಗರವಾಗಿಸಲು ಸಹಾಯವಾಗುತ್ತದೆ’ ಎಂದು ನಗರಸಭೆಯ ಸ್ವಚ್ಛತಾ ರಾಯಭಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅಭಿಪ್ರಾಯಪಟ್ಟರು.

ನಗರಸಭೆ ಸದಸ್ಯರಾದ ಸಿ.ರಾಕೇಶ್, ಗುಣಶೇಖರ್, ಕೆ.ಎಂ.ಮಂಜುನಾಥ್, ಪರಿಸರ ಎಂಜಿನಿಯರ್ ಎಂ.ಎಸ್.ಪುನೀತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಂಘಟನಾ ಆಯುಕ್ತ ವಿ.ಬಾಬು, ಸ್ಕೌಟ್ಸ್ ಆಯುಕ್ತ ಕೆ.ಆರ್.ಸುರೇಶ್, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಂಯೋಜನಾಧಿಕಾರಿ ಮಹದೇವಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT