ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ನಿವಾರಣೆಗೆ ಕೈಜೋಡಿಸಿ: ಜಿಲ್ಲಾಧಿಕಾರಿ

ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ: ಅಪೌಷ್ಟಿಕತೆ ನಿಯಂತ್ರಣ ದೊಡ್ಡ ಸವಾಲು
Last Updated 29 ನವೆಂಬರ್ 2021, 15:56 IST
ಅಕ್ಷರ ಗಾತ್ರ

ಕೋಲಾರ: ‘ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆಯಿತ್ತು. ಹೀಗಾಗಿ ಜನ ಹಸಿವಿನ ಹಾಹಾಕಾರದಿಂದ ಮೃತಪಡುತ್ತಿದ್ದರು. ಆದರೆ, ಈಗ ದೇಶದಲ್ಲಿ ಆಹಾರದ ಕೊರತೆಯಿಲ್ಲ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅಭಿಪ್ರಾಯಪಟ್ಟರು.

ರೇಷ್ಮೆ ಕೃಷಿ ವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವದ ಭಾಗವಾಗಿ ತಾಲ್ಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ 30 ಲಕ್ಷ ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿತ್ತು. ಹಸಿರು ಕ್ರಾಂತಿಯಿಂದ ದೇಶದಲ್ಲಿ ಈಗ 300 ಮಿಲಿಯನ್ ಟನ್ ಆಹಾರ ಪದಾರ್ಥ ಬೆಳೆಯಲಾಗುತ್ತಿದೆ’ ಎಂದು ವಿವರಿಸಿದರು.

‘ಈಗ ಹಸಿವಿನಿಂದ ಯಾರೂ ಸಾಯುತ್ತಿಲ್ಲ. ಆದರೆ, ಅಪೌಷ್ಟಿಕತೆ ಕಾಡುತ್ತಿದೆ. ಇದನ್ನು ತೊಡೆದು ಹಾಕಲು ಎಲ್ಲರೂ ಕೈಜೋಡಿಸಬೇಕು. ಕಾಲೇಜಿನಲ್ಲಿ ಪದವಿ ಗಳಿಸಿದ ನಂತರ ವಿದ್ಯಾರ್ಥಿಗಳು ಸಂಶೋಧನೆ, ವಿಸ್ತರಣೆ, ಆವಿಷ್ಕಾರ ಅಥವಾ ಬೋಧನೆ, ಸರ್ಕಾರಿ ಕೆಲಸಕ್ಕೆ ಹೋಗಬಹುದು. ಆದರೆ, ಇದೊಂದು ಅದ್ಭುತ ಅನುಭವ’ ಎಂದು ಹೇಳಿದರು.

‘ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ರೈತರು, ಕೃಷಿ ವಿಜ್ಞಾನಿಗಳು, ಕೃಷಿ ವಿಸ್ತರಣೆ ಮತ್ತು ಸಂಶೋಧನೆ ಕಾರಣ. ಆಹಾರದ ಉತ್ಪಾದನೆ ಹೆಚ್ಚಿದ್ದರೂ ಎಲ್ಲರಿಗೂ ಪೌಷ್ಟಿಕಭರಿತ ಆಹಾರ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಅಪೌಷ್ಟಿಕತೆ ನಿಯಂತ್ರಣ ಮಾಡುವುದು ದೊಡ್ಡ ಸವಾಲು’ ಎಂದರು.

ಪ್ರತಿಕೂಲ ಪರಿಣಾಮ: ‘ನಿಸರ್ಗದಲ್ಲಿ ರೈತರಿಗೆ ಉಪಯುಕ್ತವಾದ ಹಲವು ಜೀವಿಗಳಿವೆ. ಅತಿಯಾಗಿ ಕೀಟನಾಶಕ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತ್ತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈಗ ಹಸಿರು ರಾಸಾಯನಿಕ ಲಭ್ಯವಿದ್ದು, ಅದನ್ನು ಬಳಕೆ ಮಾಡುವುದರಿಂದ ಬೆಳೆಗೆ ಹಾನಿ ಆಗುವ ಕೀಟಗಳನ್ನು ಕೊಲ್ಲುತ್ತದೆ. ರೈತರು ಉತ್ಪಾದನೆ ಹೆಚ್ಚಿಸುವ ಮೂಲಕ ಮಾರುಕಟ್ಟೆ ಮೂಲಗಳನ್ನು ಹುಡುಕಿಕೊಳ್ಳಬೇಕು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಬಸವೇಗೌಡ ಕಿವಿಮಾತು ಹೇಳಿದರು.

‘ರೈತರು ಹೆಚ್ಚಿನ ಹಣವನ್ನು ಕೀಟನಾಶಕಕ್ಕೆ ವೆಚ್ಚ ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆಗೆ ಹೋಗಿ ರೈತರು ಬರಿಗೈಯಲ್ಲಿ ಹಿಂದಿರುಗುತ್ತಾರೆ. ಸರ್ಕಾರವೇ ರೈತರು ಬೆಳೆದ ಬೆಳೆಯನ್ನು ಖರೀದಿಸಬೇಕು’ ಎಂದು ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಒತ್ತಾಯಿಸಿದರು.

ಚಿಂತಾಮಣಿಯ ರೇಷ್ಮೆ ಕೃಷಿ ವಿದ್ಯಾರ್ಥಿಗಳು 3 ತಿಂಗಳ ಕಾಲ ಕೋಲಾರ ತಾಲ್ಲೂಕಿನ ನಾಗನಾಳ, ರಾಜಕಲ್ಲಹಳ್ಳಿ ಮತ್ತು ಅಂಕತಟ್ಟಿ ಗ್ರಾಮದ ರೈತರ ತೋಟಗಳಿಗೆ ಭೇಟಿ ನೀಡಿ ಕೃಷಿ ಕಾರ್ಯಾನುಭವ ಗಳಿಸಿದ್ದರು. ಪ್ರಗತಿಪರ ರೈತ ಮಂಜುನಾಥ್, ರೇಷ್ಮೆ ಕೃಷಿ ವಿ,ವಿ ಡೀನ್ ವೆಂಕಟರಮಣ, ಸುಗಟೂರು ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯ ಭೂಪತಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT