ಸೋಮವಾರ, ಅಕ್ಟೋಬರ್ 14, 2019
22 °C

ನ.1ಕ್ಕೆ ಕನ್ನಡ ತೇರು ಮೆರವಣಿಗೆ

Published:
Updated:
Prajavani

ಕೋಲಾರ: ‘ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಥ ನಮ್ಮ ಪಥ ಕಾರ್ಯದಡಿ ‘ಕನ್ನಡ ತೇರು’ ಮೆರವಣಿಗೆಯನ್ನು ನ.1ರಂದು ಹಮ್ಮಿಕೊಳ್ಳಲಾಗಿದೆ’ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ತಿಳಿಸಿದರು.

ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗುರುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕಿನ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ನ.1ರಂದು ಬೆಳಿಗ್ಗೆ 9 ರಥ ಮೆರವಣಿಗೆ ಚಾಲನೆ ನೀಡಲಾಗುವುದು’ ಎಂದರು.

‘ನರಸಾಪುರ ಕೈಗಾರಿಕೆ ಪ್ರದೇಶ, ವೇಮಗಲ್ ಕೈಗಾರಿಕೆ ಪ್ರದೇಶ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರಿಸುವ ಜವಬ್ದಾರಿ ತಾಲ್ಲೂಕು ಅಧ್ಯಕ್ಷರು ವಹಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರಿಗೆ ಕನ್ನಡದ ಭಾಷೆ ಬಗ್ಗೆ ಪರಿಚಯಿಸಲು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗುವುದು. ಮೆರವಣಿಗೆ ಜತೆಗೆ ಯುವ ಕಾರ್ಯಕರ್ತರು ಬೈಕ್ ರ್‌್ಯಾಲಿ ನಡೆಸಿ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಹಕ್ಕೋತ್ತಾಯ ಮಾಡಬೇಕು’ ಎಂದು ಸೂಚಿಸಿದರು.

‘ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆಯಾಗಬೇಕು, ಡಾ.ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿಯಾಗಬೇಕು, ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಆಗಬೇಕು’ ಎಂದು ಒತ್ತಾಯಿಸಲಾಗುವುದು.

‘ಕೆಜಿಎಫ್‌ನ ಕುವೆಂಪು ಸಾರಿಗೆ ಬಸ್ ನಿಲ್ದಾಣದಲ್ಲಿ ವೇದಿಕೆಯಿಂದ ಕುವೆಂಪು ಪ್ರತಿಮೆ ಅನಾವರಣ ಮಾಡಲು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನ.5ರಂದು ಸರ್ವೇ ಅಧಿಕಾರಿ ಸುರೇಶ್ ಬಾಬು ಅಕ್ರಮಗಳ ತನಿಖೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದು, ಇದಕ್ಕೆ ಕಾರ್ಯಕರ್ತರು ಸಹಕಾರ ನೀಡಬೇಕು’ ಎಂದು ಕೋರಿದರು.

ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು, ಗೌರವಾಧ್ಯಕ್ಷ ಕೋದಂಡರಾಮಯ್ಯ, ಪದಾಧಿಕಾರಿಗಳಾದ ಮುನಿರಾಜು, ಮಧುಕೃಷ್ಣಾರೆಡ್ಡಿ, ಮೆಹಬೂಬ್ ಪಾಷ, ಲೋಕೇಶ್, ಪ್ರಭಾಕರ್, ನಾಗರಾಜ್ ಹಾಜರಿದ್ದರು.

Post Comments (+)