ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟಗಾರರು ನಾಡು–ನುಡಿಗೆ ಒಗ್ಗೂಡಿ’

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸೋಮಶೇಖರ್‌ ಕಿವಿಮಾತು
Last Updated 4 ಜನವರಿ 2021, 14:58 IST
ಅಕ್ಷರ ಗಾತ್ರ

ಕೋಲಾರ: ‘ಕನ್ನಡಪರ ಹೋರಾಟಗಾರರು ಭಿನ್ನಾಭಿಪ್ರಾಯ ಬದಿಗಿಟ್ಟು ನಾಡು, ನುಡಿ ಉಳಿವಿಗೆ ಒಗ್ಗೂಡಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅ.ಕೃ.ಸೋಮಶೇಖರ್‌ ಕಿವಿಮಾತು ಹೇಳಿದರು.

ಇಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಕನ್ನಡ ಭಾಷೆಗಾಗಿ ಏನಾದರೂ ಮಾಡಲೇಬೇಕೆಂಬ ಛಲ ಮತ್ತು ದೃಢ ಮನಸ್ಸು ಮುಖ್ಯ’ ಎಂದು ಪ್ರತಿಪಾದಿಸಿದರು.

‘ಸಂಘಟನಾ ಶಕ್ತಿಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಜವಾಬ್ದಾರಿಗಳ ಜತೆಗೆ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕನ್ನಡ, ಕನ್ನಡಿಗ, ಕರ್ನಾಟಕವನ್ನು ಬಹುಭಾಷಿಕ ಪರಿಸರವಾದ ಕೋಲಾರದಲ್ಲಿ ಉಳಿಸಿ ಬೆಳೆಸುವುದು ಸುಲಭವಾಗಿರಲಿಲ್ಲ. ಇದರ ಹಿಂದೆ ಹೋರಾಟಗಳಿವೆ, ಸಾಕಷ್ಟು ನೋವುಗಳಿವೆ. ಇಷ್ಟೆಲ್ಲಾ ಹೋರಾಟದ ಮಧ್ಯೆ ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಮೂಡಿಸುವುದು ಸವಾಲಿನ ವಿಚಾರ’ ಎಂದು ಹೇಳಿದರು.

‘2ನೇ ಮೈಸೂರು ದಸರಾವೆಂಬಂತೆ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಮಾಡಿದ್ದೇವೆ. ಈ ದಾರಿಯಲ್ಲಿ ಎದುರಿಸಿದ ಕಷ್ಟ, ಸವಾಲುಗಳಿಗೆ ಲೆಕ್ಕವಿಲ್ಲ. ಕನ್ನಡದ ಉಳಿವಿಗೆ, ಕನ್ನಡದ ಅಭಿಮಾನದ ಕಿಚ್ಚು ಹೆಚ್ಚಿಸಲು ಜೈಲು ವಾಸ ಅನುಭವಿಸಿದೆವು’ ಎಂದು ತಮ್ಮ ಹೋರಾಟದ ಹಾದಿ ಸ್ಮರಿಸಿದರು.

ಸಾಹಿತ್ಯ ಪೂರಕ: ‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಮಹತ್ವವಿದೆ. ಸ್ಥಳೀಯ ಸಾಹಿತಿಗಳ ಸಾಧನೆಯಿಂದ ಕನ್ನಡ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ರಾಜ್‌ಕುಮಾರ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆದ ಗೋಕಾಕ್‌ ಚಳವಳಿಯಲ್ಲಿ ಪಾಲ್ಗೊಂಡಿದ್ದ ನಾನು ಪೊಲೀಸರಿಂದ ಲಾಠಿ ಏಟು ತಿಂದಿದ್ದೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ತಿಳಿಸಿದರು.

‘ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ವ್ಯಕ್ತಿತ್ವ ರೂಪಿಸಿಕೊಳ್ಳಲು ಕನ್ನಡ ಸಾಹಿತ್ಯ ಪೂರಕ. ಸಾಹಿತ್ಯದ ಓದಿನಿಂದ ಮನಸ್ಸಿಗೆ ನೆಮ್ಮದಿ ಸಿಗುವುದರ ಜತೆಗೆ ಜ್ಞಾನ ವೃದ್ಧಿಸುತ್ತದೆ’ ಎಂದು ತಹಶೀಲ್ದಾರ್ ಆರ್.ಶೋಭಿತಾ ಅಭಿಪ್ರಾಯಪಟ್ಟರು.

ಹೋರಾಟ ಮಿಗಿಲು: ಆಶಯ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮುನಿರತ್ನಪ್ಪ, ‘ಸಾಹಿತ್ಯ ಕ್ಷೇತ್ರಕ್ಕಿಂತ ಕನ್ನಡ ಹೋರಾಟ ಮಿಗಿಲು. ಕನ್ನಡ ಹೋರಾಟಕ್ಕೆ 150 ವರ್ಷಗಳ ಇತಿಹಾಸವಿದೆ. ಕನ್ನಡಿಗರು ಆತ್ಮಗೌರವದಿಂದ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

‘ಕನ್ನಡಿಗರು ತಲೆ ಎತ್ತಿ ನಿಲ್ಲಲು ಹೋರಾಟದ ಕಿಚ್ಚು ಜೀವಂತವಾಗಿರಬೇಕು. ಒತ್ತಾಯ ಅಥವಾ ಭಯದಿಂದ ಭಾಷೆ ಮೇಲೆ ಪ್ರೀತಿ ಹುಟ್ಟುವುದಿಲ್ಲ. ನಾಡು, ನುಡಿ, ಸಂಸ್ಕೃತಿ ಇಲ್ಲದೆ ಕನ್ನಡ ಸಾಹಿತ್ಯವಿಲ್ಲ. ನಾಡು ನುಡಿಯ ರಕ್ಷಣೆ ಎಲ್ಲರ ಜವಾಬ್ದಾರಿ. ಕವಿಗಳು ಹೊಸ ಜ್ಞಾನ ಶಾಖೆಗಳಿಗೆ ಬರಬೇಕು. ವರ್ತಮಾನದ ಸ್ಥಿತಿಗತಿ ಕುರಿತು ಕವಿತೆ ರಚನೆಯಾಗಬೇಕು’ ಎಂದು ಆಶಿಸಿದರು.

ಸಮ್ಮೇಳನಾಧ್ಯಕ್ಷರ ಬದುಕು ಬರಹ, ಕನ್ನಡ ಚಳವಳಿಗಳ ಜೀವಂತಿಕೆ ಕುರಿತು ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ನಡೆದವು. ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಎ.ವಿ.ರವಿ, ದ್ವಿತೀಯು ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಆಯುಕ್ತ ಶ್ರೀಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT