ಶುಕ್ರವಾರ, ಡಿಸೆಂಬರ್ 4, 2020
21 °C

ಆಟೊ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ಪಿ.ಸಿ ಬಡಾವಣೆ ಆಟೊ ನಿಲ್ದಾಣದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಾಡ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ‘ಆಟೊ ಚಾಲಕರು ವೈಯಕ್ತಿಕ ಸುರಕ್ಷತೆಯ ಜತೆಗೆ ಪ್ರಯಾಣಿಕರ ಸುರಕ್ಷತೆ ಬಗ್ಗೆಯೂ ಕಾಳಜಿ ವಹಿಸಬೇಕು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸಂಚಾರ ನಿಯಮ ಉಲ್ಲಂಘನೆಯ ಕಾರಣಕ್ಕೆ ಸಾಕಷ್ಟು ಅಪಘಾತ ಸಂಭವಿಸುತ್ತವೆ. ಜನರ ಸುರಕ್ಷತೆಗಾಗಿಯೇ ಸಂಚಾರ ನಿಯಮಗಳನ್ನು ರೂಪಿಸಲಾಗಿದೆ. ಅತಿ ವೇಗದ ಚಾಲನೆ ಮತ್ತು ಪಾನಮತ್ತರಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದಲ್ಲ. ಆಟೊ ಚಾಲಕರು ಹೆಚ್ಚಿನ ಹಣ ಪಡೆದು ಪ್ರಯಾಣಿಕರನ್ನು ಶೋಷಿಸಬಾರದು’ ಎಂದು ತಿಳಿಸಿದರು.

‘ಕನ್ನಡ ರಾಜ್ಯೋತ್ಸವವು ನಿತ್ಯೋತ್ಸವವಾಗಬೇಕು. ಕನ್ನಡ ನಾಡನ್ನು ಆಳಿದ ಅನೇಕ ರಾಜರು ನಾಡಿಗಾಗಿ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆಗೆ ಧಕ್ಕೆಯಾಗದಂತೆ ಸಂಕಲ್ಪ ಮಾಡೋಣ. ನಾಡಿಗೆ ಬರುವ ಅನ್ಯಭಾಷಿಕರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಎಸ್‍ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಸಲಹೆ ನೀಡಿದರು.

5 ಸಾವಿರ ಆಟೊ: ‘ಜಿಲ್ಲಾ ಕೇಂದ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಆಟೊಗಳು ಸಂಚರಿಸುತ್ತಿವೆ. ಬಹುತೇಕ ಆಟೊ ಚಾಲಕರು ಸಮವಸ್ತ್ರ ಧರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ’ ಎಂದು ಆಟೊ ಚಾಲಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

ಚಾಲಕರು ಆಟೊಗಳನ್ನು ಹೂವು ಮತ್ತು ಕನ್ನಡದ ಬಾವುಟಗಳೊಂದಿಗೆ ಸಿಂಗರಿಸಿ ಮೆರವಣಿಗೆ ಮಾಡಿ ಕನ್ನಡ ಪ್ರೇಮ ಮೆರೆದರು. ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ರೋಟರಿ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.