ಭಾನುವಾರ, ನವೆಂಬರ್ 29, 2020
25 °C

ಕನ್ನಡ ರಾಜ್ಯೋತ್ಸವ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪ್ರತಿ ವರ್ಷ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಆತಂಕ ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಸಂಬಂಧ ಇಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘1956ರಲ್ಲಿ ಮೈಸೂರು ರಾಜ್ಯ ಉದಯವಾಯಿತು. ನಂತರ 1973ರ ನ.1ರಂದು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನ.1ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ’ ಎಂದರು.

‘ನಗರದ ಎಂ.ಜಿ ರಸ್ತೆಯ ಗಾಂಧಿವನದಲ್ಲಿ ನ.1ರಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು ಕನ್ನಡ ನಾಡು ನುಡಿಯ ಬಗ್ಗೆ ಭಾಷಣ ಮಾಡುತ್ತಾರೆ. ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸಬೇಕು’ ಎಂದು ಸೂಚಿಸಿದರು.

‘ಸರ್ಕಾರಿ ಕಚೇರಿ ಕಟ್ಟಡಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಬೇಕು. ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಲ್ಲಿ 3 ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡುತ್ತೇವೆ. ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದರು.

ಕನ್ನಡ ನಾಮಫಲಕ: ‘ಪ್ರತಿ ಬಾರಿ ಪಲ್ಲಕ್ಕಿಗಳ ಮೂಲಕ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಪಲ್ಲಕ್ಕಿ ಹಾಗೂ ಮೆರವಣಿಗೆ ಇರುವುದಿಲ್ಲ. ಕೈಗಾರಿಕೆಗಳು ಹಾಗೂ ಅಂಗಡಿಗಳ ಮುಂದೆ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕು’ ಎಂದು ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ. ಸಾರ್ವಜನಿಕರ ಸಹಕಾರದಿಂದ ಕೋವಿಡ್ ನಿರ್ಮೂಲನೆ ಮಾಡಬೇಕು. ಕನ್ನಡ ಭವನವನ್ನು ಉದ್ಘಾಟನೆ ವೇಳೆ ಮಾತ್ರ ತೆರೆದು ನಂತರ ಮುಚ್ಚಲಾಗಿದೆ. ಕನ್ನಡ ಭವನಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.