ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಳೆ ನಡುವೆ ಅದ್ಧೂರಿ ಕರಗ ಮಹೋತ್ಸವ

Last Updated 17 ಮೇ 2022, 12:26 IST
ಅಕ್ಷರ ಗಾತ್ರ

ಕೋಲಾರ: ನಗರದ ಪಿ.ಸಿ ಬಡಾವಣೆಯ ರೇಣುಕಾ ಯಲ್ಲಮ್ಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗವು ಸೋಮವಾರ ಜಡಿ ಮಳೆ ನಡುವೆಯೂ ಅದ್ಧೂರಿಯಾಗಿ ನಡೆಯಿತು.

ಮಳೆದ ಸುರಿದ ಕಾರಣಕ್ಕೆ ಸುಮಾರು ಒಂದು ತಾಸು ತಡವಾಗಿ ರಾತ್ರಿ 10ಕ್ಕೆ ಕರಗ ಆರಂಭವಾಯಿತು. ಕರಗ ಹೊತ್ತ ಪೂಜಾರಿ ಬೇತಮಂಗಲದ ಮಂಜುನಾಥ್ ಅವರು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಗೋವಿಂದಾ, ಗೋವಿಂದಾ ಎಂಬ ಜೈಕಾರದೊಂದಿಗೆ ಜನರ ಚಪ್ಪಾಳೆ ತಟ್ಟಿದರು.

ದೇವಾಲಯದ ಮುಂಭಾಗ ನಿರ್ಮಿಸಿದ್ದ ವೇದಿಕೆಯಲ್ಲಿ ಮಂಜುನಾಥ್‌ ಅವರು ಪ್ರದರ್ಶಿಸಿದ ವಿವಿಧ ಭಂಗಿಗಳ ಕರಗ ನೃತ್ಯವು ಜನಮನ ಸೂರೆಗೊಂಡಿತು. ನೃತ್ಯಕ್ಕೆ ತಮಟೆ ವಾದ್ಯವು ಮುದ ನೀಡಿತು. ಕರಗದ ಪೂಜಾರಿಯು ನಟ ದಿವಂಗತ ಪುನೀತ್ ರಾಜ್‍ಕುಮಾರ್‌ರ ಭಾವಚಿತ್ರ ಹಿಡಿದು ನೃತ್ಯ ಮಾಡಿದಾಗ ಜನರ ಕರತಾಡನ ಮುಗಿಲು ಮುಟ್ಟಿತು. ಕರಗದೊಂದಿಗೆ ವಿವಿಧ ದೇವರುಗಳ ಪಲ್ಲಕ್ಕಿ ಮೆರವಣಿಗೆ ತಮಟೆ, ವಾದ್ಯಗಳ ನಿನಾದಕ್ಕೆ ಜನ ಕುಣಿದು ಕುಪ್ಪಳಿಸಿದರು.

ಕೋವಿಡ್‍ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಕರಗ ಮಹೋತ್ಸವ ಕಳೆಗುಂದಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ಕರಗ ನಡೆಸಲು ರೇಣುಕಾ ಯಲ್ಲಮ್ಮ ದೇವಾಲಯ ಸಮಿತಿ ಸಿದ್ಧತೆ ನಡೆಸಿತ್ತು. ಸಮಿತಿಯ ಆಶಯಕ್ಕೆ ಮಳೆ ಅಡ್ಡಿ ಉಂಟು ಮಾಡಿದರೂ, ಅದನ್ನು ಲೆಕ್ಕಿಸದೆ ಕರಗ ಮಹೋತ್ಸವವನ್ನು ವೈಭವದಿಂದ ನಡೆಸಲಾಯಿತು. 30ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಅಗ್ನಿಕುಂಡ ಪ್ರವೇಶ ನಡೆಯಿತು.

ರಸಸಂಜೆ ರದ್ದು: ಕರಗ ಮಹೋತ್ಸವದ ಅಂಗವಾಗಿ ಸರಿಗಮಪ ಕಲಾವಿದರ ತಂಡದಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಸಂಗೀತ ರಸಸಂಜೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಜೂನ್‌ 25ರಂದು ರೇಣುಕಾಯಲ್ಲಮ್ಮ ದೇವಿಯ ದೀಪೋತ್ಸವ ನಡೆಯಲಿದ್ದು, ಆ ದಿನ ಇದೇ ಕಲಾವಿದರ ತಂಡದಿಂದ ಸಂಗೀತ ರಸಸಂಜೆ ನಡೆಸಲು ಸಮಿತಿಯು ನಿರ್ಧರಿಸಿದೆ.

ರೇಣುಕಾ ಯಲ್ಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್, ಕಾರ್ಯದರ್ಶಿ ರಮೇಶ್, ಸದಸ್ಯರಾದ ಆರ್ಮುಗಂ, ಎಲ್‍ಐಸಿ ಮುನಿಯಪ್ಪ, ಶ್ರೀನಿವಾಸ್, ಸುರೇಶ್, ಮಂಜುನಾಥ್, ಸಂಪತ್‍ಕುಮಾರ್, ಯಲ್ಲಪ್ಪ, ಮಹೇಶ್, ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ವಕೀಲ ಕೆ.ಆರ್.ಧನರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT