ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕರ್ನಾಟಕ ಕಲ್ಯಾಣ ಯಾತ್ರೆ

Last Updated 17 ಸೆಪ್ಟೆಂಬರ್ 2020, 15:56 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಜನತಾ ಪರಿವಾರ ಹಾಗೂ ಸಂಯುಕ್ತ ಜನತಾ ದಳದ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಸೆ.19ರಿಂದ ಕರ್ನಾಟಕ ಕಲ್ಯಾಣ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ನಡೆಸಿರುವ ವಿವಿಧ ಪಕ್ಷಗಳ ದುರಾಡಳಿತ ಅವಲೋಕಿಸಿದರೆ ಜನರಿಗೆ ಇಂತಹ ಸರ್ಕಾರಗಳು ಅಗತ್ಯವೇ ಎಂಬ ಪ್ರಶ್ನೆ ಕಾಡುತ್ತದೆ. ಜನರ ಹಿತ ಕಾಯುವಲ್ಲಿ ಎಲ್ಲಾ ಪಕ್ಷಗಳ ಸರ್ಕಾರಗಳು ವಿಫಲವಾಗಿವಾಗಿವೆ. ಸರ್ಕಾರಗಳಿಂದ ಜನರಿಗೆ ಭದ್ರತೆ ಇಲ್ಲವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ರೈತರು, ಬಡ ಜನರು, ಕಾರ್ಮಿಕರು ಕೋವಿಡ್‌–19 ಸಂಕಷ್ಟದಿಂದ ಬೀದಿ ಪಾಲಾಗಿದ್ದಾರೆ. ಜನ ಸಾಮಾನ್ಯರು ಜೀವನ ನಿರ್ವಹಣೆ ಮಾಡಲಾಗದೆ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಜನವಿರೋಧಿ ನಿಲುವು ಕಾರಣವಾಗಿದೆ’ ಎಂದು ದೂರಿದರು.

ರೈತ ಕುಲಕ್ಕೆ ಮಾರಕ: ‘ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿತು. ಸರ್ಕಾರದ ಈ ನಡೆ ಖಂಡನೀಯ. ಈ ಎರಡೂ ತಿದ್ದುಪಡಿ ಕಾಯ್ದೆಗಳು ರೈತ ಕುಲಕ್ಕೆ ಮಾರಕ. ರಾಜ್ಯದ 410 ಎಪಿಎಂಸಿಗಳು ವಿನಾಶದ ಅಂಚಿಗೆ ತಲುಪಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಾಜ್ಯವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗ್ರಾಮ ಸ್ವರಾಜ್ ಅಭಿಯಾನ ಆರಂಭಿಸಿದ್ದು, ಮೊದಲ ಹಂತದಲ್ಲಿ ಕೋಲಾರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆ ನರಸಾಪುರ, ಹೊಸಕೋಟೆ ಹಾಗೂ ಕೆ.ಆರ್.ಪುರ ಮಾರ್ಗದಲ್ಲಿ ಸಾಗಲಿದ್ದು, ಸೆ.21ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಜೆಡಿಯು ರಾಜ್ಯ ಯುವ ಘಟಕದ ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಚಂದ್ರಶೇಖರ್, ಸುಮನ್ ದಯಾಳನ್, ತಂಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT