ಶುಕ್ರವಾರ, ಡಿಸೆಂಬರ್ 4, 2020
21 °C
ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ

ಜಿಲ್ಲಾ ಕೇಂದ್ರದಲ್ಲಿ ಕೆ.ಸಿ.ರೆಡ್ಡಿ ಪುತ್ಥಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಇಲ್ಲಿ ಶನಿವಾರ ಆರಂಭವಾದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಜಿಲ್ಲೆಯವರಾದ ಕೆ.ಸಿ.ರೆಡ್ಡಿ ಅವರ ನೆನಪಿನಲ್ಲಿ ಜಿಲ್ಲೆಯಲ್ಲಿ ಏನನ್ನೂ ಮಾಡಿಲ್ಲ. ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗುವ ಮೂಲಕ ರೈತರಿಗೆ ಅನುಕೂಲ ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ರೆಡ್ಡಿ ಅವರ ನೆನಪಿಗಾಗಿ ಪುತ್ಥಳಿ ನಿರ್ಮಿಸಲು ನಿರ್ಧರಿಸಿದ್ದು, ಜಿಲ್ಲೆಯ ಎಲ್ಲಾ ಸಹಕಾರಿಗಳು ಹಾಗೂ ಸಹಕಾರ ಸಂಸ್ಥೆಗಳು ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ಪ್ರಗತಿ ಸಾಧಿಸಲು ಯುವಕರು ಮುಂದಾಳತ್ವ ವಹಿಸಬೇಕು. ನಂಬಿಕೆ, ವಿಶ್ವಾಸ, ಪಾರದರ್ಶಕ ವ್ಯವಹಾರದ ಮೂಲಕ ಸಹಕಾರ ರಂಗವನ್ನು ಬಲಪಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ನಷ್ಟದಿಂದ ಮುಚ್ಚುವ ಹಂತ ತಲುಪಿದ್ದ ಡಿಸಿಸಿ ಬ್ಯಾಂಕ್‌ಗೆ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಜೀವ ತುಂಬಿದೆ. ಗೋವಿಂದಗೌಡರು ಬ್ಯಾಂಕ್‌ನ ಅಧ್ಯಕ್ಷರಾದರೆ ನಿಭಾಯಿಸುವುದು ಕಷ್ಟವಾಗಬಹುದೆಂದು ಅಧ್ಯಕ್ಷ ಸ್ಥಾನಕ್ಕೆ ಬೇರೆಯವರ ಹೆಸರು ಸೂಚಿಸಿದ್ದೆ. ಆದರೆ, ಗೋವಿಂದಗೌಡರು ನನ್ನ ನಿರೀಕ್ಷೆಗೂ ಮೀರಿ ಬ್ಯಾಂಕ್‌ ಅಭಿವೃದ್ಧಿಪಡಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಲಿಷ್ಠವಾಗಿದೆ: ‘ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿದೆ ಎಂಬುದಕ್ಕೆ ಕೋಚಿಮುಲ್ ಹಾಗೂ ಡಿಸಿಸಿ ಬ್ಯಾಂಕ್ ಸಾಧನೆಯೇ ಸಾಕ್ಷಿ. ಡಿಸಿಸಿ ಬ್ಯಾಂಕ್ 7 ವರ್ಷಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ 36 ಸಾವಿರಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿಗೆ, 1,823 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಗೂ ರೈತರಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

‘ಕೋಚಿಮುಲ್‌ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಒಕ್ಕೂಟಕ್ಕೆ ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ. ಕೋಲಾರದಲ್ಲಿ ₹ 200 ಕೋಟಿ ವೆಚ್ಚದಲ್ಲಿ ಎಂ.ವಿ.ಕೃಷ್ಣಪ್ಪ ಮೆಗಾ ಡೇರಿ ಸ್ಥಾಪನೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಾತಿನಿಧ್ಯ ಚರ್ಚೆ: ‘ಸಹಕಾರ ಸಂಸ್ಥೆಗಳ ಸದಸ್ಯತ್ವ ಹೆಚ್ಚಿಸುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಆಡಳಿತ ಮಂಡಳಿಯಲ್ಲಿ ಪ್ರಾತಿನಿಧ್ಯ ಪಡೆಯಬೇಕು. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಜತೆ ಚರ್ಚಿಸಿದ್ದೇವೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ವಿವರಿಸಿದರು.

ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಸ್.ವಿ.ಗೋವರ್ಧನರೆಡ್ಡಿ, ನಿರ್ದೇಶಕರಾದ ಇ.ಗೋಪಾಲಪ್ಪ, ಎಸ್.ಆರ್.ರುದ್ರಸ್ವಾಮಿ, ಎನ್.ಶಂಕರನಾರಾಯಣಗೌಡ, ಅರುಣಮ್ಮ, ಡಿ.ಆರ್.ರಾಮಚಂದ್ರೇಗೌಡ, ಎಸ್.ಸುರೇಶ್, ಪಿ.ಎಂ.ವೆಂಕಟೇಶ್, ಎನ್.ನಾಗರಾಜ್, ಕೆ.ಎಂ.ಮಂಜುನಾಥ್, ಬಿ.ರಮೇಶ್, ಟಿ.ಕೆ.ಬೈರೇಗೌಡ, ವಿ.ಪಾಪಣ್ಣ, ಸಿಇಒ ಕೆ.ಎಂ.ಭಾರತಿ, ಕೋಲಾರ ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.