ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ನೀರು: ವದಂತಿ ಹಬ್ಬಿಸಬೇಡಿ- ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ

ಕೆರೆಗಳ ನೀರು ಪರಿಶೀಲಿಸಿದ ಡಿಸಿ
Last Updated 21 ಮೇ 2019, 13:40 IST
ಅಕ್ಷರ ಗಾತ್ರ

ಕೋಲಾರ: ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿದು ಬರುತ್ತಿರುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಯೋಜನೆ ವ್ಯಾಪ್ತಿಯ ಕೆರೆಗಳ ನೀರನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಂಗಳವಾರ ಖುದ್ದು ಪರಿಶೀಲಿಸಿದರು.

ತಾಲ್ಲೂಕಿನ ನರಸಾಪುರ ಕೆರೆ ಕೋಡಿಯಲ್ಲಿ ಹಸಿರು ಬಣ್ಣಕ್ಕೆ ತಿರುಗಿರುವ ನೀರು (ಪಾಚಿ ಮಿಶ್ರಿತ) ಹರಿಯುತ್ತಿರುವುದನ್ನು ಕೆಲವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ನರಸಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಆತಂಕಗೊಂಡಿದ್ದರು.

ಸಣ್ಣ ನೀರಾವರಿ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಆರೋಗ್ಯ ಸುರಕ್ಷತೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಸಿಂಗೇನಹಳ್ಳಿ, ನರಸಾಪುರ ಕೆರೆ ಅಂಗಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯು ಕೋಡಿಯಲ್ಲಿ ಹಾಗೂ ಲಕ್ಷೀಸಾಗರ ಕೆರೆಯಿಂದ ಪಂಪ್‌ ಅಗುತ್ತಿರುವ ನೀರಿನ ಗುಣಮಟ್ಟ ಪರಿಶೀಲಿಸಿದರು.

‘ಕೆ.ಸಿ ವ್ಯಾಲಿ ನೀರಿನಿಂದ ಭರ್ತಿಯಾಗಿರುವ ಕೆರೆಗಳ ನೀರಿನ ಮಾದರಿ ಸಂಗ್ರಹಿಸಿ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಗುಣಮಟ್ಟದ ಬಗ್ಗೆ ವರದಿ ನೀಡಿ’ ಎಂದು ಜಿಲ್ಲಾಧಿಕಾರಿಯು ಅಧಿಕಾರಿಗಳಿಗೆ ಸೂಚಿಸಿದರು.

‘ನರಸಾಪುರ ಕೆರೆ ನೀರು ಹರಿಯುವ ರಾಜಕಾಲುವೆಗೆ ಅಡ್ಡಲಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದ್ದು, ಈ ಸಂಬಂಧ ಸರ್ವೆ ಮಾಡಿ ವರದಿ ಸಲ್ಲಿಸಿ. ರಾಜಕಾಲುವೆ ಜಾಗ ಒತ್ತುವರಿಯಾಗಿದ್ದರೆ ಶೀಘ್ರವೇ ತೆರವುಗೊಳಿಸಿ’ ಎಂದು ಕಂದಾಯ ನಿರೀಕ್ಷರಿಗೆ ಆದೇಶಿಸಿದರು.

ಅನುಕೂಲವಾಗಿದೆ: ಸಿಂಗಹಳ್ಳಿ ರೈತರು, ‘ಕೆ.ಸಿ ವ್ಯಾಲಿ ಯೋಜನೆ ನೀರು ಗ್ರಾಮದ ಕೆರೆಗೆ ಹರಿದು ಬಂದಿರುವುದಿಂದ ತುಂಬಾ ಅನುಕೂಲವಾಗಿದೆ. ಕೆರೆಯ ಅಕ್ಕಪಕ್ಕದ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ’ ಎಂದು ಜಿಲ್ಲಾಧಿಕಾರಿ ಎದುರು ಸಂತಸ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆರೆಯಲ್ಲಿ ಸಂಗ್ರಹವಾಗಿರುವ ಅಥವಾ ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ಯಾವುದೇ ಕಾರಣಕ್ಕೂ ನೇರವಾಗಿ ಕೃಷಿ ಚಟುವಟಿಕೆಗಳಿಗೆ ಬಳಸಬಾರದು. ಕೆರೆ ಅಂಗಳದಲ್ಲಿರುವ ಕೊಳವೆ ಬಾವಿಗಳ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದರು.

‘ಒಂದು ವರ್ಷ ತಾಳ್ಮೆ ವಹಿಸಿದರೆ ಜಿಲ್ಲೆಯ 126 ಕೆರೆಗಳಿಗೂ ಕೆ.ಸಿ ವ್ಯಾಲಿ ನೀರು ಹರಿಯುತ್ತದೆ. ಅಧಿಕಾರಿಗಳ ಕಣ್ತಪ್ಪಿಸಿ ಕೆರೆಯ ನೀರು ಕೃಷಿಗೆ ಬಳಸಿದರೆ ಇತರರಿಗೆ ಅನುಕೂಲ ಆಗುವುದಿಲ್ಲ. ಬೇರೆ ತಾಲ್ಲೂಕಿನವರು ಸಂಕಷ್ಟ ಎದುರಿಸಬೇಕಾಗುತ್ತದೆ. ಎಲ್ಲಾ ಕೆರೆಗಳು ತುಂಬಿದ ಮೇಲೆ ನೀರು ಬಳಸಿದರೂ ಪ್ರಶ್ನೆ ಮಾಡುವುದಿಲ್ಲ’ ಎಂದರು.

ಕ್ರಮ ಕೈಗೊಳ್ಳುತ್ತೇವೆ: ‘ಕೆ.ಸಿ ವ್ಯಾಲಿ ಯೋಜನೆಯಿಂದ ಪ್ರತಿನಿತ್ಯ 220 ಎಂಎಲ್‌ಡಿ ನೀರು ಹರಿಯುತ್ತಿದ್ದು, ಈಗಾಗಲೇ 14 ಕೆರೆ ತುಂಬಿ ಕೋಡಿ ಹರಿದಿವೆ. ಪೆರ್ಜೇನಹಳ್ಳಿ ಕೆರೆಗೂ ನೀರು ಹರಿದು ಬರುತ್ತಿದೆ. ನರಸಾಪುರ ಸುತ್ತಮುತ್ತಲಿನ ಕೈಗಾರಿಕೆಗಳ ತ್ಯಾಜ್ಯದಿಂದ ಕೆರೆಗಳ ನೀರು ಹಸಿರು ಬಣ್ಣಕ್ಕೆ ತಿರುಗಿರುವ ಸಾಧ್ಯತೆಯಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕೆರೆಗಳಿಗೆ ತ್ಯಾಜ್ಯ ನೀರು ಹರಿಬಿಡುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳ ನೀರಿನ ಮಾದರಿ ಸಂಗ್ರಹಿಸಿದ್ದು, ಏನಾದರೂ ವ್ಯತ್ಯಾಸ ಕಂಡುಬಂದರೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರವಿದೆ. ಇಂತಹ ಸಂದರ್ಭದಲ್ಲಿ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಂಡಿರುವುದು ಜಿಲ್ಲೆಯ ಜನರಿಗೆ ವರದಾನವಾಗಿದೆ. ಜನರು ನೀರಿನ ಸಮಸ್ಯೆಯ ಗಂಭೀರತೆ ಅರಿತು ವದಂತಿ ಹಬ್ಬಿಸುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು.

ಭತ್ತ ಬೆಳೆಯಿರಿ: ರೈತರು ಲಕ್ಷ್ಮೀಸಾಗರ ಕೆರೆ ಸಮೀಪದ ಜಮೀನುಗಳಲ್ಲಿನ ನೀಲಗಿರಿ ಮರಗಳನ್ನು ತೆರವುಗೊಳಿಸಿ ಕೃಷಿ ಆರಂಭಿಸಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ‘ನೀರಿನ ಪ್ರಮಾಣ ಹೆಚ್ಚಿದ ನಂತರ ಭತ್ತ ಬೆಳೆಯಿರಿ’ ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಮ್ಮೇಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣ, ಪರಿಸರ ಆರೋಗ್ಯ ಸುರಕ್ಷತೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಪ್ರತಿನಿಧಿಗಳಾದ ವಿನೋದ್, ರಘು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT