ಮಂಗಳವಾರ, ಮೇ 18, 2021
24 °C
ಚಲ್ಲಘಟ್ಟದ ಸಂಸ್ಕರಣಾ ಘಟಕದಲ್ಲಿ ದೋಷ: ನೀರು ಹರಿವು ಸ್ಥಗಿತ

ಕೆ.ಸಿ ವ್ಯಾಲಿ ನೀರಿನಲ್ಲಿ ನೊರೆ: ಜನರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಹರಿದು ಬಂದ ಕೆ.ಸಿ ವ್ಯಾಲಿ ಯೋಜನೆ ನೀರಿನಲ್ಲಿ ಬುಧವಾರ ನೊರೆ ಕಾಣಿಸಿಕೊಂಡಿತು.

ಕೋಲಾರ: ಬೆಂಗಳೂರಿನಿಂದ ಜಿಲ್ಲೆಗೆ ಹರಿದು ಬರುತ್ತಿರುವ ಕೋರಮಂಗಲ– ಚಲ್ಲಘಟ್ಟ (ಕೆ.ಸಿ ವ್ಯಾಲಿ) ಯೋಜನೆಯ ತ್ಯಾಜ್ಯ ನೀರಿನಲ್ಲಿ ಬುರುಗು (ನೊರೆ) ಕಾಣಿಸಿಕೊಂಡಿದ್ದು, ನೀರು ಹರಿಸುವುದನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ.

ಯೋಜನೆ ಕಾಮಗಾರಿ ಪೂರ್ಣಗೊಂಡ ನಂತರ ಜೂನ್‌ 2ರಿಂದ ಜಿಲ್ಲೆಗೆ ಪ್ರತಿನಿತ್ಯ ಸುಮಾರು 100 ಎಂಎಲ್‌ಡಿ ನೀರು ಹರಿದು ಬರುತ್ತಿತ್ತು. ನೀರಿನಿಂದ ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ ತುಂಬಿ ಕೋಡಿ ಹರಿದು ಉದ್ದಪ್ಪನಹಳ್ಳಿ, ಜೋಡಿ ಕೃಷ್ಣಾಪುರ, ನರಸಾಪುರ ಹಾಗೂ ದೊಡ್ಡವಲ್ಲಭಿ ಕೆರೆಗೆ ನೀರು ಹರಿಯುತ್ತಿತ್ತು.

ಭಾನುವಾರ (ಜುಲೈ 15) ಲಕ್ಷ್ಮೀಸಾಗರ ಕೆರೆ ವೀಕ್ಷಿಸಿದ್ದ ವಿಧಾಸಸಭಾ ಅಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ನೀರು ಹರಿವು ಪ್ರಮಾಣ ಹೆಚ್ಚಿಸುವಂತೆ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆ ನಂತರ ಅಧಿಕಾರಿಗಳು ಭಾನುವಾರ 80 ಎಂಎಲ್‌ಡಿ ಹೆಚ್ಚಳ ಮಾಡಿದ್ದರು. 48 ತಾಸುಗಳ ಬಳಿಕ ಬುಧವಾರ ಬೆಳಿಗ್ಗೆ ಲಕ್ಷ್ಮೀಸಾಗರ ಕೆರೆಗೆ ಬಂದ ಆ ನೀರಿನಲ್ಲಿ ನೊರೆ ಕಾಣಿಸಿಕೊಂಡಿದೆ.

ಕೆರೆ ಹಾಗೂ ಕಾಲುವೆಯ ನೀರಿನ ಮೇಲ್ಭಾಗದಲ್ಲಿ ನೊರೆ ಪ್ರಮಾಣ ಹೆಚ್ಚಿದೆ. ಬುರುಗು ಮಿಶ್ರಿತ ನೀರಿನಿಂದ ಲಕ್ಷ್ಮೀಸಾಗರ ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದನ್ನು ಗಮನಿಸಿದ ಸ್ಥಳೀಯರು ಸಣ್ಣ ನೀರಾವರಿ ಇಲಾಖೆ ಹಾಗೂ ಕೆ.ಸಿ ವ್ಯಾಲಿ ಯೋಜನೆ ಅಧಿಕಾರಿಗಳಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅಧಿಕಾರಿಗಳು ನೀರು ಹರಿಸುವುದನ್ನು ಮಧ್ಯಾಹ್ನ ಸ್ಥಗಿತಗೊಳಿಸಿದ್ದಾರೆ.

ಸಂಸ್ಕರಣೆಯಾಗಿಲ್ಲ: ‘ಯೋಜನೆ ವ್ಯಾಪ್ತಿಯಲ್ಲಿ ಬೆಂಗಳೂರಿನ ಚಲ್ಲಘಟ್ಟ ಬಳಿ ನೀರಿನ ನಾಲ್ಕು ಸಂಸ್ಕರಣಾ ಘಟಕಗಳಿದ್ದು, ಈ ಪೈಕಿ 3 ಹಳೆಯ ಘಟಕಗಳಾಗಿವೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ಈ ಘಟಕಗಳನ್ನು ನಿರ್ವಹಣೆ ಮಾಡುತ್ತಿದೆ. ಭಾನುವಾರದವರೆಗೆ ಹಳೆಯ 3 ಘಟಕಗಳಿಂದ ಮಾತ್ರ ಪ್ರತಿನಿತ್ಯ 100 ಎಂಎಲ್‌ಡಿ ನೀರು ಸಂಸ್ಕರಿಸಿ ಜಿಲ್ಲೆಗೆ ಹರಿಸಲಾಗುತ್ತಿತ್ತು’ ಎಂದು ಕೆ.ಸಿ ವ್ಯಾಲಿ ಯೋಜನೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘108 ಎಂಎಲ್‌ಡಿ ಸಂಸ್ಕರಣಾ ಸಾಮರ್ಥ್ಯದ ಹೊಸ ಘಟಕವು ಭಾನುವಾರವಷ್ಟೇ ಕಾರ್ಯಾರಂಭ ಮಾಡಿದೆ. ಆ ಘಟಕದಲ್ಲಿ ನೀರು ಸರಿಯಾಗಿ ಸಂಸ್ಕರಣೆಯಾಗದ ಕಾರಣ ನೊರೆ ಕಾಣಿಸಿಕೊಂಡಿದೆ. ನೊರೆ ಸಮಸ್ಯೆ ತಾತ್ಕಾಲಿಕವಾಗಿದ್ದು, ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನೀರು ಸಂಸ್ಕರಣಾ ಘಟಕವು ಮೂರ್ನಾಲ್ಕು ದಿನ ಕಾರ್ಯ ನಿರ್ವಹಿಸಿದ ನಂತರ ನೊರೆ ಕಡಿಮೆಯಾಗಲಿದೆ’ ಎಂದು ಹೇಳಿದ್ದಾರೆ.

ಜನರಲ್ಲಿ ಆತಂಕ: ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಸದ್ಯ ಎರಡು ಹಂತದಲ್ಲಿ ಸಂಸ್ಕರಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಸಂಸ್ಕರಿಸಿದ ನಂತರವಷ್ಟೇ ನೀರು ಬಳಕೆಗೆ ಯೋಗ್ಯವೆಂದು ಭಾರತೀಯ ವಿಜ್ಞಾನ ಸಂಸ್ಥೆಯು ವರದಿ ನೀಡಿತ್ತು. ಈ ವರದಿ ಆಧರಿಸಿ ಅವಿಭಜಿತ ಕೋಲಾರ ಜಿಲ್ಲೆಯ ನೀರಾವರಿ ಹೋರಾಟಗಾರರು ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ, ಶುದ್ಧತೆ ಖಾತ್ರಿಪಡಿಸಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ನೀರಿನಲ್ಲಿ ನೊರೆ ಕಾಣಿಸಿಕೊಂಡಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.

₹ 1,280 ಕೋಟಿ ವೆಚ್ಚ
ಹಿಂದಿನ ಕಾಂಗ್ರೆಸ್‌ ಸರ್ಕಾರವು ₹ 1,280 ಕೋಟಿ ಅಂದಾಜು ವೆಚ್ಚದ ಕೆ.ಸಿ ವ್ಯಾಲಿ ಯೋಜನೆ ಕೈಗೆತ್ತಿಕೊಂಡಿತ್ತು. 2016ರ ಮೇ 30ರಂದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಹಲವು ಅಡೆತಡೆಗಳ ನಡುವೆ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಜಿಲ್ಲೆಯ 121 ಕೆರೆಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ 5 ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸರ್ಕಾರ ಬೆಂಗಳೂರಿನ ಬೆಳ್ಳಂದೂರು ಕೆರೆಯ ಮಾದರಿಯಲ್ಲೇ ಜಿಲ್ಲೆಯ ಕೆರೆಗಳನ್ನು ಹಾಳು ಮಾಡಲು ಹೊರಟಿದೆ. ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸದ ಕಾರಣ ನೊರೆ ಕಾಣಿಸಿಕೊಂಡಿದೆ. ಈ ವಿಷಕಾರಿ ನೀರಿನಿಂದ ಜಿಲ್ಲೆಗೆ ದೊಡ್ಡ ಗಂಡಾಂತರ ಕಾದಿದೆ
ವಿ.ಕೆ.ರಾಜೇಶ್‌, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು