ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕಪ್ಪು ಬಣ್ಣಕ್ಕೆ ತಿರುಗಿದ ಕೆ.ಸಿ ವ್ಯಾಲಿ ನೀರು

ನೊರೆ ಜತೆ ರಾಸಾಯನಿಕದ ವಾಸನೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
Last Updated 3 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಕೋಲಾರ: ಬೆಂಗಳೂರಿನಿಂದ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಹರಿದು ಬರುತ್ತಿರುವ ಕೆ.ಸಿ ವ್ಯಾಲಿ ಯೋಜನೆ ನೀರಿನಲ್ಲಿ ಬುರುಗು (ನೊರೆ) ಕಾಣಿಸಿಕೊಂಡು ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಲಕ್ಷ್ಮೀಸಾಗರ ಕೆರೆಯ ಡಿ.ಸಿ ಪಾಯಿಂಟ್‌ನಲ್ಲಿ ಮೂರ್ನಾಲ್ಕು ದಿನದಿಂದ ಕಲುಷಿತ ನೀರು ಬರುತ್ತಿದ್ದು, ಕೆರೆ ಹಾಗೂ ಕಾಲುವೆಯ ನೀರಿನ ಮೇಲ್ಭಾಗದಲ್ಲಿ ನೊರೆ ಪ್ರಮಾಣ ಹೆಚ್ಚಿದೆ. ಬುರುಗು ಮಿಶ್ರಿತ ನೀರಿನಲ್ಲಿ ರಾಸಾಯನಿಕ ಬೆರೆತಿರುವ ಶಂಕೆ ವ್ಯಕ್ತವಾಗಿದ್ದು, ಕಾಲುವೆಯಲ್ಲಿನ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.

ಇದನ್ನು ಗಮನಿಸಿದ ಸ್ಥಳೀಯರು ಸಣ್ಣ ನೀರಾವರಿ ಇಲಾಖೆ ಹಾಗೂ ಕೆ.ಸಿ ವ್ಯಾಲಿ ಯೋಜನೆ ಅಧಿಕಾರಿಗಳಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಲಕ್ಷ್ಮೀಸಾಗರ ಕೆರೆ ಹಾಗೂ ಡಿ.ಸಿ ಪಾಯಿಂಟ್‌ಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು.

ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸದೆ ಕಾಲುವೆಗೆ ಹರಿಸಿರುವ ಆರೋಪ ಕೇಳಿಬಂದಿದ್ದು, ಲಕ್ಷ್ಮೀಸಾಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 2018ರ ಜುಲೈ ತಿಂಗಳಲ್ಲಿ ಇದೇ ರೀತಿ ಕೆ.ಸಿ ವ್ಯಾಲಿ ನೀರಿನಲ್ಲಿ ನೊರೆ ಕಾಣಿಸಿಕೊಂಡಿತ್ತು. ಬಳಿಕ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು.

ನಿರ್ಲಕ್ಷ್ಯ ಸರಿಯಲ್ಲ: ‘ಸರ್ಕಾರ ಈ ಮೊದಲು ಘೋಷಣೆ ಮಾಡಿದಂತೆ 2 ಹಂತದಲ್ಲಿ ನೀರು ಸಂಸ್ಕರಿಸಿ ಹರಿಸಬೇಕು. ಆದರೆ, ಅಧಿಕಾರಿಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ’ ಎಂದು ಲಕ್ಷ್ಮೀಸಾಗರ ಗ್ರಾಮಸ್ಥರು ಕಿಡಿಕಾರಿದರು.

‘ಬೆಂಗಳೂರಿನ ಕೊಳಚೆ ನೀರನ್ನು ಹರಿಸುತ್ತಿದ್ದರೂ ವಿರೋಧ ಮಾಡಿರಲಿಲ್ಲ. ಕೆರೆಗೆ ನೀರು ಬಂದು ಅಂತರ್ಜಲ ವೃದ್ಧಿಯಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿದ್ದೆವು. ಆದರೆ, ಅಧಿಕಾರಿಗಳು ನೀರನ್ನು ಸಂಸ್ಕರಿಸದೆ ಹರಿಸುತ್ತಿದ್ದಾರೆ. ವಿಷಕಾರಿಯಾಗಿರುವ ಈ ನೀರು ಕೊಳವೆ ಬಾವಿಗಳಲ್ಲಿನ ಅಂತರ್ಜಲ ಸೇರಿದರೆ ನಮ್ಮ ಗತಿ ಏನು?’ ಎಂದು ಸೀತಿ ಹೊಸೂರು ಗ್ರಾಮದ ಜನರು ಪ್ರಶ್ನಿಸಿದರು.

‘ಕೊಳಚೆ ನೀರು ಹರಿಸುವುದನ್ನು ಶೀಘ್ರವೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಸರ್ಕಾರ ಯೋಜನೆಯ ಆರಂಭದಲ್ಲಿ ತಿಳಿಸಿರುವಂತೆ 2 ಹಂತದಲ್ಲಿ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮಾಹಿತಿ ನೀಡುತ್ತೇವೆ: ‘ನೀರಿನ ಹರಿವು ಸ್ಥಗಿತಗೊಳಿಸುವುದು ನಮ್ಮ ಕಾರ್ಯ ವ್ಯಾಪ್ತಿಯಲ್ಲಿ ಇಲ್ಲ. ಬೆಂಗಳೂರಿನ ಬೆಳ್ಳಂದೂರು ಕೆರೆ ಬಳಿ ನೀರನ್ನು ಸಂಸ್ಕರಿಸಿ ಹರಿಸಿರುವುದಾಗಿ ತಿಳಿದುಬಂದಿದೆ. ನೀರಿನಲ್ಲಿ ನೊರೆ ಕಾಣಿಸಿಕೊಂಡು ಕಪ್ಪು ಬಣ್ಣಕ್ಕೆ ತಿರುಗಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪಾರ್ವತಿ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರಿಗೆ ಕರೆ ಮಾಡಿ ನೀರು ಕಪ್ಪು ಬಣ್ಣಕ್ಕೆ ತಿರುಗಿರುವ ಸಂಗತಿ ತಿಳಿಸಿದರು. ಬಳಿಕ ಜಿಲ್ಲಾಧಿಕಾರಿಯು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT