ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ: ಸತ್ಯ ಮನವರಿಕೆಗೆ ಪ್ರಯತ್ನ: ಸಚಿವ ಕೃಷ್ಣ ಬೈರೇಗೌಡ

ಗಣರಾಜ್ಯೋತ್ಸವ
Last Updated 26 ಜನವರಿ 2019, 14:16 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ನೀರಿನ ಬವಣೆ ನೀಗಿಸಲು ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಲಾಯಿತು. ಸುಪ್ರೀಂ ಕೋರ್ಟ್‌ ಯೋಜನೆಗೆ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ ಸತ್ಯ ಮನವರಿಕೆ ಮಾಡಿಕೊಡಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆಗೆ ಸುಮಾರು ₹ 1,300 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆ ನೀರಿನಿಂದ ಈಗಾಗಲೇ ಜಿಲ್ಲೆಯ ನಾಲ್ಕೈದು ಕೆರೆಗಳು ತುಂಬಿವೆ’ ಎಂದು ತಿಳಿಸಿದರು.

‘ಬರಪೀಡಿತ ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆಯಿಂದ ನೀರು ಬರುತ್ತಿತ್ತು. ಇದಕ್ಕೆ ತಡೆಯಾಜ್ಞೆ ತಂದಿರುವುದು ದುರಾದೃಷ್ಟ. ಅವಿಭಜಿತ ಜಿಲ್ಲೆಯಲ್ಲಿ ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವವರ ಸಂಖ್ಯೆ ಹೆಚ್ಚಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಮತ್ತು ಕುಡಿಯುವ ನೀರು ಪೂರೈಕೆಗೆ ₹ 2,600 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪೈಕಿ ₹ 1,800 ಕೋಟಿ ವೆಚ್ಚ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಈಗಾಗಲೇ 29 ಸಾವಿರ ಕಾಮಗಾರಿ ಕೈಗೊಂಡಿದ್ದು, 27 ಸಾವಿರ ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದು ವಿವರಿಸಿದರು.

‘ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ₹ 40.25 ಕೋಟಿ ಮಂಜೂರಾಗಿದ್ದು, ₹ 38.40 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ ₹ 33.02 ಕೋಟಿ ವೆಚ್ಚವಾಗಿದೆ. 1,073 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮನವಿ ಮಾಡುತ್ತೇವೆ: ‘ಜಿಲ್ಲೆಯಲ್ಲಿ ನಿರುದ್ಯೋಗ ನಿರ್ಮೂಲನೆಗೆ ನರೇಗಾ ಅಡಿ 22.88 ಲಕ್ಷ ಮಾನವ ದಿನ ಸೃಜಿಸುವ ಗುರಿಯಿತ್ತು. ಈಗಾಗಲೇ 30.81 ಲಕ್ಷ ಮಾನವ ದಿನ ಸೃಜಿಸಿ ಜಿಲ್ಲೆಯು ನರೇಗಾ ಅನುಷ್ಠಾನದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಕೇಂದ್ರದಿಂದ  ₹ 1,800 ಕೋಟಿ ಅನುದಾನ ಬರಬೇಕಿದ್ದು, ರಾಜ್ಯದಿಂದ ನಿಯೋಗ ತೆರಳಿ ಬಿಡುಗಡೆಗೆ ಮನವಿ ಮಾಡಲಾಗುವುದು’ ಎಂದರು.

‘ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಜಿಲ್ಲೆಯ 6 ತಾಲ್ಲೂಕುಗಳೆಗೆ ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಅನುದಾನ ಬಳಕೆ ಮಾಡಲಾಗುತ್ತಿದೆ. ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ₹ 2,434 ಕೋಟಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಬೆಳೆ ಸಾಲ ಮನ್ನಾ: ‘ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ₹ 2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಮಾಡಿದೆ. ಜಿಲ್ಲೆಯ ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ 10,503 ರೈತರು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿನ 28,797 ರೈತರು ಸಾಲ ಮನ್ನಾದ ಪ್ರಯೋಜನ ಪಡೆದಿದ್ದಾರೆ. ಈವರೆಗೆ ₹ 400 ಕೋಟಿಗೂ ಹೆಚ್ಚು ಸಾಲ ಮನ್ನಾ ಪ್ರಯೋಜನವಾಗಿದೆ. ಮುಂದಿನ ತಿಂಗಳೊಳಗೆ ₹ 8 ಸಾವಿರ ಕೋಟಿ ಸಾಲ ಮನ್ನಾ ಹಣ ಸರ್ಕಾರದಿಂದ ಪಾವತಿಯಾಗುತ್ತದೆ’ ಎಂದು ವಿವರಿಸಿದರು.

‘ಹಿಂದಿನ ಸರ್ಕಾರ ಜಾರಿಗೊಳಿಸಿರುವ ಅನ್ನ ಭಾಗ್ಯ, ವಿದ್ಯಾಸಿರಿ, ಕ್ಷೀರ ಭಾಗ್ಯ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಿದೆ. ರಾಜ್ಯದ ಸಮಸ್ಯೆಗಳ ನಿವಾರಣೆಗೆ ಕೇಂದ್ರದಿಂದ ಸಿಗಬೇಕಿದ್ದ ಅನುದಾನ ಈವರೆಗೂ ಬಿಡುಗಡೆಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಕಿ ಅಂಶ.....
* ₹ 40.25 ಕೋಟಿ ನೀರಿಗೆ ಮಂಜೂರು
* ₹ 38.40 ಕೋಟಿ ಹಣ ಬಿಡುಗಡೆ
* ₹ 33.02 ಕೋಟಿ ವೆಚ್ಚವಾಗಿದೆ
* 1,073 ನೀರಿನ ಘಟಕ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT