ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರು ಬೆಂಗಳೂರಿನ ಅಭಿವೃದ್ಧಿಯ ಹರಿಕಾರ: ಸಂಸದ ಮುನಿಸ್ವಾಮಿ ಬಣ್ಣನೆ

Last Updated 27 ಜೂನ್ 2021, 15:39 IST
ಅಕ್ಷರ ಗಾತ್ರ

ಕೋಲಾರ: ‘ಮನುಷ್ಯನ ಜೀವನ ಅಮೂಲ್ಯವಾದದ್ದು. ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಿ ಇತಿಹಾಸದ ಪುಟದಲ್ಲಿ ಉಳಿಯುವಂತಹ ಕೆಲಸ ಮಾಡಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಕೆಂಪೇಗೌಡ ಜಯಂತಿ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಒಕ್ಕಲಿಗರು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಜನರಿಗೆ ಆಹಾರ ಬೆಳೆದುಕೊಡುವ ಒಕ್ಕಲಿಗ ಸಮುದಾಯವು ಸ್ವಾಭಿಮಾನದ ಸಂಕೇತ’ ಎಂದು ಬಣ್ಣಿಸಿದರು.

‘ಜಾಗತಿಕವಾಗಿ ಬೆಂಗಳೂರನ್ನು ವಿಶೇಷವಾಗಿ ನೋಡುವ ರೀತಿಯಲ್ಲಿ ನಿರ್ಮಾಣ ಮಾಡಿದ ಕೆಂಪೇಗೌಡರು ಸಮಾಜದ ವಿವಿಧ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಅವರು ಒಂದು ಸಮುದಾಯಕ್ಕೆ ಸೀಮಿತವಾಗದೆ ಸಮಾಜದ ಎಲ್ಲಾ ವರ್ಗಗಳ ಏಳಿಗೆಗೆ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಯ ಹರಿಕಾರರಾದ ಅವರು ಕೆರೆ, ದೇವಾಲಯಗಳನ್ನು ಕಟ್ಟಿಸಿದ್ದಾರೆ’ ಎಂದು ಸ್ಮರಿಸಿದರು.

‘ರಾಜ್ಯ ಬಿಜೆಪಿ ಸರ್ಕಾರ ಕೆಂಪೇಗೌಡರ ಸಾಧನೆಯನ್ನು ಸಮಾಜಕ್ಕೆ ಸಾರುವ ಕೆಲಸ ಮಾಡಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡಿದೆ. ಒಕ್ಕಲಿಗ ಸಮಾಜದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ನಿರ್ಮಲಾನಂದ ಸ್ವಾಮೀಜಿ ಬಡವರಿಗೆ ಶಿಕ್ಷಣದ ಜತೆಗೆ ಆಶ್ರಯ ಕೊಟ್ಟಿದ್ದಾರೆ’ ಎಂದರು.

‘ಟಿ.ಚನ್ನಯ್ಯ ಅವರು ಕೋಲಾರದಲ್ಲಿ ಯುಜಿಡಿ, ಉದ್ಯಾನಗಳನ್ನು ನಿರ್ಮಿಸಿ ನಗರದ ಅಭಿವೃದ್ಧಿಗೆ ನಾಂದಿಯಾಡಿದರು. ಅವರು ಸಾಮಾಜಿಕ ಕೆಲಸಗಳು ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ. ಕೋಲಾರದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಉದ್ಯಾನ ಹಾಗೂ ಮಹನೀಯರ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಉಸಿರಾಡಲು ಶುದ್ಧ ಗಾಳಿ ಮುಖ್ಯ ಎಂಬ ಸತ್ಯ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ನಮಗೆಲ್ಲಾ ಅರ್ಥವಾಗಿದೆ. ಪ್ರಕೃತಿಯ ಉಳಿವಿಗಾಗಿ ಗಿಡ ಮರ ಬೆಳಸಬೇಕು. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಆಹಾರ ಸಮಸ್ಯೆ: ‘ಕೆಂಪೇಗೌಡರು ನಮ್ಮಿಂದ ದೂರವಾಗಿದ್ದರೂ ಅವರ ಸೇವೆ ಇಂದಿಗೂ ಪ್ರಸ್ತುತವಾಗಿದೆ. ‘ಒಕ್ಕಲಿಗರನ್ನು ಅನ್ನದಾತರೆಂದು ಕರೆಯಲಾಗುತ್ತದೆ. ಸಮುದಾಯವು ಒಕ್ಕಲುತನ ಮುಂದುವರಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್ ಆತಂಕ ವ್ಯಕ್ತಪಡಿಸಿದರು.

‘ಕೆಂಪೇಗೌಡರು ಬೆಂಗಳೂರಿನಲ್ಲಿ ಎಲ್ಲಾ ಸಮುದಾಯದವರಿಗೂ ಜೀವನ ರೂಪಿಸಿಕೊಳ್ಳಲು ಅಡಿಪಾಯ ಹಾಕಿಕೊಟ್ಟಿದ್ದಾರೆ. ಅವರು ಯಾವುದೇ ಜಾತಿ, ಸಮುದಾಯ, ಧರ್ಮದ ಪರ ಕೆಲಸ ಮಾಡಿದವರಲ್ಲ. ಬಸವಣ್ಣನ ಹಾದಿಯಲ್ಲಿ ಸಾಗಿದ ಅವರು ಸಮ ಸಮಾಜದ ಕನಸು ಕಂಡಿದ್ದರು’ ಎಂದು ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಮಮತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT