ಒಕ್ಕಲಿಗ ಸಮುದಾಯ ಸ್ವಾಭಿಮಾನದ ಸಂಕೇತ

7
ಕೆಂಪೇಗೌಡ ಜಯಂತಿಯಲ್ಲಿ ಮಂಗಳಾನಂದನಾಥ ಸ್ವಾಮೀಜಿ ಹೇಳಿಕೆ

ಒಕ್ಕಲಿಗ ಸಮುದಾಯ ಸ್ವಾಭಿಮಾನದ ಸಂಕೇತ

Published:
Updated:
ಕೆಂಪೇಗೌಡ ಜಯಂತಿ ಅಂಗವಾಗಿ ಕೋಲಾರದಲ್ಲಿ ಬುಧವಾರ ನಡೆದ ಪಲ್ಲಕ್ಕಿಗಳ ಮೆರವಣಿಗೆಯಲ್ಲಿ ಬಾಲಕನೊಬ್ಬ ಕೆಂಪೇಗೌಡ ವೇಷಾಧಾರಿಯಾಗಿ ಗಮನ ಸೆಳೆದ.

ಕೋಲಾರ: ‘ಒಕ್ಕಲಿಗರು ಸಮಾಜದಲ್ಲಿ ಗೌರವಯುತವಾಗಿ ಬದುಕುವುದರ ಜತೆಗೆ ಇತರ ಸಮುದಾಯಗಳಿಗೆ ಮಾದರಿಯಾಗಬೇಕು’ ಎಂದು ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಮಂಗಳಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಜಿಲ್ಲಾ ಒಕ್ಕಲಿಗರ ಸಂಘವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮೆರವಣಿಗೆ ಉದ್ಘಾಟಿಸಿ ಮಾತನಾಡಿ, ‘ಒಕ್ಕಲಿಗರು ಹಿಂದಿನಿಂದಲೂ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಈ ಗೌರವ ಕಾಪಾಡಿಕೊಂಡು ಹೋಗುವುದು ಸಮುದಾಯದ ಜವಾಬ್ದಾರಿ’ ಎಂದರು.

‘ಜನರಿಗೆ ಆಹಾರ ಬೆಳೆದುಕೊಡುವ ಒಕ್ಕಲಿಗ ಸಮುದಾಯವು ಸ್ವಾಭಿಮಾನದ ಸಂಕೇತ. ಹೀಗಾಗಿ ಒಕ್ಕಲಿಗರನ್ನು ಅನ್ನದಾತರೆಂದು ಕರೆಯಲಾಗುತ್ತದೆ. ಸಮುದಾಯವು ಒಕ್ಕಲುತನ ಮುಂದುವರಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಸಮಾಜ, ಧರ್ಮ, ಮಠದ ವಿಚಾರ ಬಂದಾಗ ರಾಜಕೀಯ ಬಿಟ್ಟು ಸಮಾಜಕ್ಕಾಗಿ ಹೋರಾಟ ಮಾಡಿದರೆ ಜಯ ಸಿಗುತ್ತದೆ ಎಂದು ಬಾಲಗಂಗಾಧರನಾಥ ಸ್ವಾಮೀಜಿ ತಿಳಿಸಿಕೊಟ್ಟಿದ್ದಾರೆ. ಶಿಕ್ಷಣ ಪಡೆಯಲು ಸಾಧ್ಯವಾಗದ ಸಮುದಾಯದ ಬಡ ಮಕ್ಕಳ ಅನುಕೂಲಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಪೋಷಕರು ಮಕ್ಕಳನ್ನು ಅಲ್ಲಿಗೆ ಸೇರಿಸಬೇಕು’ ಎಂದು ಸಲಹೆ ನೀಡಿದರು.

‘ಬೆಂಗಳೂರಿನ ವಿವಿಧೆಡೆ ವಾಸಿಸುತ್ತಿರುವ ಹಲವು ಸಮುದಾಯದವರು ಬದುಕು ಕಟ್ಟಿಕೊಳ್ಳಲು ಚಿಕ್ಕಪೇಟೆ, ಬಳೆಪೇಟೆ, ದೊಡ್ಡಪೇಟೆ ಹೀಗೆ ಬಡಾವಣೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಎಲ್ಲೂ ಒಕ್ಕಲಿಗರ ಪೇಟೆ ಕಟ್ಟಿಲ್ಲ. ರಾಜ್ಯವು ಒಕ್ಕಲಿಗರ ಹಿಡಿತದಲ್ಲಿದೆ ಎಂದರೆ ತಪ್ಪಾಗಲಾರದು’ ಎಂದು ಹೇಳಿದರು.

ಕೊರಗು ನೀಗಿಸಿದ್ದಾರೆ: ‘ಈ ಹಿಂದೆ ಕ್ಷೇತ್ರದ ಸಭೆ ಸಮಾರಂಭಗಳ ವೇದಿಕೆಯಲ್ಲಿ ಸಮುದಾಯದ ಶಾಸಕರು ಇರಲಿಲ್ಲಿವೆಂಬ ಕೊರಗಿತ್ತು. ಈಗ ಕ್ಷೇತ್ರದ ಜನ ಒಕ್ಕಲಿಗ ಸಮುದಾಯದ ಶ್ರೀನಿವಾಸಗೌಡರನ್ನು ಗೆಲ್ಲಿಸುವ ಮೂಲಕ ಆ ಕೊರಗು ನೀಗಿಸಿದ್ದಾರೆ. ಇದರಿಂದ ಈ ಭಾಗದಲ್ಲಿ ಸಮುದಾಯದ ಅಭಿವೃದ್ಧಿಗೆ ಸಹಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಗುಂಪುಗಾರಿಕೆ ಬೇಡ: ‘ಕೆಂಪೇಗೌಡರ ಸಹಕಾರದಿಂದ ಬೆಂಗಳೂರು ನಿರ್ಮಾಣವಾಗಿದೆ. ಸಮುದಾಯದವರು ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

‘ರಾಜಕೀಯ ಪರಿಸ್ಥಿತಿ ಏನೇ ಇದ್ದರೂ ಸಮುದಾಯದ ವಿಚಾರದಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಬೇಡ. ಸಮುದಾಯ ಒಗ್ಗೂಡಿಸುವ ನಿಟ್ಟಿನಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಸರ್ಕಾರದ ವತಿಯಿಂದ ಕೆಂಪೇಗೌಡ ಜಯಂತಿ ಆಚರಿಸುತ್ತಿರುವುದು ಒಳ್ಳೆಯದು. ಜಯಂತಿ ಆಚರಣೆಗೆ ರಾಜಕೀಯ ಬೇಡ. ಸಮುದಾಯದ ಕುವೆಂಪು ಅವರು ನಾಡಗೀತೆ, ರೈತ ಗೀತೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಆದರ್ಶ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದರು.

ಸಾಮರಸ್ಯದಿಂದ ಬಾಳಿ: ‘ಸಮುದಾಯದವರು ಸಂಘಟಿತರಾದಾಗ ಮಾತ್ರ ಸಮಸ್ಯೆಗಳಿಂದ ದೂರವಾಗಲು ಸಾಧ್ಯ. ಇತರ ಜಾತಿ, ಧರ್ಮ ಮತ್ತು ವರ್ಗದವರೊಂದಿಗೆ ಸಾಮರಸ್ಯದಿಂದ ಬಾಳಬೇಕು. ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಗೌರವಾಧ್ಯಕ್ಷ ಬಿಸ್ಸಪ್ಪಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಜೆ.ಮೌನಿ, ಉಪಾಧ್ಯಕ್ಷ ವಿ.ಕೃಷ್ಣಾರೆಡ್ಡಿ, ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಪಾಲ್ಗೊಂಡಿದ್ದರು.

ಅವಿಭಜಿತ ಕೋಲಾರ ಜಿಲ್ಲೆ ಎಂದಾಕ್ಷಣ ನೀರಿನ ಸಮಸ್ಯೆ ನೆನಪಾಗುತ್ತದೆ. ಹಿಂದಿನ ವರ್ಷ ಉತ್ತಮ ಮಳೆಯಾಗಿ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಬಗೆಹರಿದಿದೆ. ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚಿಂತಿಸಬೇಕು.
ಮಂಗಳಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !