ಮುಖ್ಯ ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಬೀದಿ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡಿರುವುದರಿಂದ ವಾಹನಗಳು ಮತ್ತು ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಸಂಬಂಧ ಸಾರ್ವಜನಿಕರು ದೂರು ನೀಡಿದ್ದರು. ಅಲ್ಲದೆ, ಕೆಲವು ವಾಹನಗಳ ಮಾಲೀಕರು ಬೀದಿ ವ್ಯಾಪಾರಿಗಳ ಸೋಗಿನಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಇದರಿಂದಾಗಿ ಹೊಸ ಸಮಸ್ಯೆ ಸೃಷ್ಟಿಯಾಗುತ್ತಿತ್ತು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ನಿರೀಕ್ಷಕ ಮುರಳಿ, ಮಂಗಳಗೌರಿ ಮತ್ತು ಹರೀಶ್ ಪೊಲೀಸ್ ಸಿಬ್ಬಂದಿಯೊಡನೆ ಕಾರ್ಯಾಚರಣೆ ನಡೆಸಿದರು. ಈ ವೇಳೆ ರಸ್ತೆ ಬದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲು ಬೀದಿ ಬದಿಯ ವ್ಯಾಪಾರಿಗಳಿಗೆ ಅಂತಿಮ ಗಡುವು ನೀಡಿದರು.