ಕೆಜಿಎಫ್ ಎಸ್‌ಪಿ ಕಚೇರಿ ಸ್ಥಳಾಂತರ: ಗೊಂದಲ ಸೃಷ್ಟಿ

ಕೋಲಾರ: ಜಿಲ್ಲೆಯ ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರದ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಮುನಿರತ್ನ ಹಾಗೂ ಸಂಸದ ಎಸ್.ಮುನಿಸ್ವಾಮಿ ಅವರು ಇಲ್ಲಿ ಸೋಮವಾರ ಧ್ವಂಧ್ವ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರು.
ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ‘ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಕೆಜಿಎಫ್‌ಗೆ ಪ್ರತ್ಯೇಕ ಎಸ್‌ಪಿ ಕಚೇರಿಯ ಅಗತ್ಯವಿತ್ತು. ಆದರೆ, ಎಸ್ಪಿ ಕಚೇರಿಯ ಅವಶ್ಯಕತೆ ಇಲ್ಲ. ಹೀಗಾಗಿ ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸುತ್ತೇವೆ’ ಎಂದು ಹೇಳಿದರು.
‘ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೆಚ್ಚುವರಿಯಾಗಿ 2 ತಾಲ್ಲೂಕುಗಳನ್ನು ನಿರ್ವಹಣೆ ಮಾಡಲು ಕಷ್ಟವಾಗಲ್ಲ. ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗಲ್ಲ. ಹೀಗಾಗಿ ಸ್ಥಳಾಂತರಕ್ಕೆ ನಾನು ಸಹಮತ ವ್ಯಕ್ತಪಡಿಸಿದ್ದೇನೆ’ ಎಂದರು.
ಆಗ ಸಚಿವರ ಪಕ್ಕದಲ್ಲೇ ಇದ್ದ ಸಂಸದ ಮುನಿಸ್ವಾಮಿ ಮಧ್ಯಪ್ರವೇಶಿಸಿ, ‘ಕೆಜಿಎಫ್ ಎಸ್ಪಿ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲ್ಲ. ಈ ಸಂಬಂಧ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜತೆ ಚರ್ಚಿಸಲಾಗಿದೆ. ಉಸ್ತುವಾರಿ ಸಚಿವರು ಉಪ ಚುನಾವಣಾ ಪ್ರಚಾರದಲ್ಲಿದ್ದ ಕಾರಣ ಅವರಿಗೆ ಮಾಹಿತಿ ಇಲ್ಲ. ಅವರಿಗೆ ಮಾಹಿತಿ ಕೊಡುತ್ತೇನೆ’ ಎಂದು ತಿಳಿಸಿದರು.
‘ಕೆಜಿಎಫ್‌ನಲ್ಲಿ 3,150 ಎಕರೆ ಜಾಗ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಆಗಲಿದೆ. ಚಿನ್ನದ ಗಣಿ ಪುನರಾರಂಭ ಆಗುವುದರಿಂದ ಖಂಡಿತ ಎಸ್‌ಪಿ ಕಚೇರಿಯ ಅಗತ್ಯವಿದೆ. ಗಣಿ ಪ್ರದೇಶ ಒತ್ತುವರಿ ಆಗುತ್ತಿರುವುದರಿಂದ ರಾಜ್ಯ ಸರ್ಕಾರವು ಕೇಂದ್ರ ಗಣಿ ಸಚಿವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ 71 ಮಂದಿ ಭದ್ರತಾ ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಸಂಸದರ ಹೇಳಿಕೆ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಸಚಿವರು, ‘ರಾಜ್ಯ ಸರ್ಕಾರ ಕೆಜಿಎಫ್ ಎಸ್ಪಿ ಕಚೇರಿಯನ್ನು ನೂತನ ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸುವ ಸಂಬಂಧ ಆ.19ರಂದು ಆದೇಶ ಹೊರಡಿಸಿತ್ತು. ಉಪ ಚುನಾವಣಾ ಪ್ರಚಾರ, ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆಯಲ್ಲಿ ನಿರತನಾಗಿದ್ದೆ. ಎಸ್‌ಪಿ ಕಚೇರಿ ಸ್ಥಳಾಂತರದ ಆದೇಶ ಮಾರ್ಪಾಡಾಗಿದೆ ಎಂದು ಸಂಸದರು ಹೇಳುತ್ತಿದ್ದಾರೆ. ಹೀಗಾಗಿ ಗೊಂದಲ ಇರಬಾರದು. ಬೆಂಗಳೂರಿಗೆ ಹೋದ ತಕ್ಷಣ ಸ್ಪಷ್ಟ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ’ ಎಂದರು.
ಎರಡೂ ಕಡೆ ಗೆಲುವು: ‘ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಿಜೆಪಿ ಸರ್ಕಾರದ ಸಾಧನೆ ಹಾಗೂ ಅಭಿವೃದ್ಧಿ ನೋಡಿ ಜನ ಮತ ಹಾಕಿದ್ದಾರೆ. ಹಿಂದಿನ ಎಲ್ಲಾ ಉಪ ಚುನಾವಣೆಗಳಲ್ಲಿ ಗೆದ್ದಿರುವಂತೆ ಈ 2 ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಿಜೆಪಿಯವರು ಉಪ ಚುನಾವಣೆಯಲ್ಲಿ ಹಣ ಹಂಚಿದ್ದಾರೆ ಎಂದು ವಿಪಕ್ಷದವರು ಆರೋಪಿಸುತ್ತಿದ್ದಾರೆ. ಹಣ ಹಂಚಿಕೆಯಾಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಹಣ ಹಂಚಿಕೆಗೆ ಸಂಬಂಧಪಟ್ಟ ಸಣ್ಣ ದಾಖಲೆಯಿದ್ದರೆ ಕೊಡಲಿ, ನೋಡೋಣ’ ಎಂದು ಸವಾಲು ಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.