ಕೆ.ಎಚ್.ಮುನಿಯಪ್ಪ ಹಠಾವೋಗೆ ಮುಂದಾಗಿ

ಶನಿವಾರ, ಮಾರ್ಚ್ 23, 2019
34 °C
ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಸಲಹೆ

ಕೆ.ಎಚ್.ಮುನಿಯಪ್ಪ ಹಠಾವೋಗೆ ಮುಂದಾಗಿ

Published:
Updated:
Prajavani

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪನನ್ನು ಕೋಲಾರ ಕ್ಷೇತ್ರದಿಂದ ಹಠಾವೋ ಮಾಡಲು ಮತದಾರರು ಮುಂದಾಗಬೇಕು’ ಎಂದು ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಸಲಹೆ ನೀಡಿದರು.

ನಗರದ ಆರ್‌ಪಿಐ ಪಕ್ಷದಿಂದ ಭಾನುವಾರ ಸಂಜೆ ನಡೆದ ಮತದಾರರ ಜಾಗೃತಿ ಅಭಿಯಾನ ಸಮಾರೋಪದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಈ ಬಾರಿ ಕೆ.ಎಚ್.ಮುನಿಯಪ್ಪನನ್ನು ಆಯ್ಕೆ ಮಾಡಿಕೊಂಡದರೆ ನಿಮ್ಮಂತಹ ನತದೃಷ್ಟ ಮತದಾರರು ಯಾರೂ ಇಲ್ಲ’ ಎಂದರು.

‘35 ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸದ ಮುನಿಯಪ್ಪನನ್ನು ಮತ್ತೆ ಆಯ್ಕೆ ಮಾಡಿಕೊಂಡರೆ ಅಂಬೇಡ್ಕರ್ ಮತ್ತೆ ಬಂದು ಸಂವಿಧನ ಬರೆದರೂ ಜನರನ್ನು ಕಾಪಾಡಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಹಠಾವೋ ಮಾಡುವುದಕ್ಕೆ ಪಕ್ಷದ ಉದ್ದೇಶ’ ಎಂದು ಸ್ಪಷ್ಟಪಡಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟ ಶಾಸಕ ವರ್ತೂರ್‌ ಪ್ರಕಾಶ್‌ನನ್ನು ಹಠಾವೋ ಮಾಡಿದಂತೆಯೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪನನ್ನು ಹಠಾವೋ ಮಾಡುವ ಹೋರಾಟಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಹಾಲಿ ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ರಥಯಾತ್ರೆ ವೇಳೆ ಮತದಾರರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುನಿಯಪ್ಪ 35 ವರ್ಷದಿಂದ ಮಾಡಿದ ಸಾಧನೆ ಶೂನ್ಯ. ಬೇರೆ ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಕೋಲಾರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬೆಂಗಳೂರು, ತುಮಕೂರು ಆಗಿರುವ ಅಭಿವೃದ್ಧಿಯಲ್ಲಿ ಕೋಲಾರ ಕ್ಷೇತ್ರವು ಶೇ.2ರಷ್ಟೂ ಆಗಿಲ್ಲ. ಚಿಂತಾಮಣಿ ತಾಲ್ಲೂಕಿನ ಮುದ್ದಲಹಳ್ಳಿ ಇದುವರೆಗೂ ಅಭಿವೃದ್ಧಿ ಕಂಡಿಲ್ಲ. ಇಂತಹ ಹಳ್ಳಿಗಳು ಲೋಕಸಭಾಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಇವೆ. ಈ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಬಿಟ್ಟರೆ ಬೇರೆ ಎಂದೂ ಹಳ್ಳಿಗಳ ಕಡೆಗೆ ಹೋಗಿಲ್ಲ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಜೆಡಿಎಸ್ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದೆ. ಕ್ಷೇತ್ರದ ಜನರನ್ನು ತೊಂದರೆಯಿಂದ ಪಾರು ಮಾಡಲು ಆರ್‌ಪಿಐನಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುತ್ತಿದ್ದು, ಅವರನ್ನು ಗೆಲ್ಲಿಸುವ ಮೂಲಕ ಕೋಲಾರ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಕೋರಿದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ರಾಮಕೃಷ್ಣಯ್ಯ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಯ್ಯ, ಆರ್‌ಪಿಐ ರಾಜ್ಯ ಘಟಕದ ಯುವ ಪ್ರಧಾನ ಕಾರ್ಯದರ್ಶಿ ಎಂ.ಚಿಟ್ಟಿಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ಎಂ.ಬ್ಯಾಟಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !