ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್ | ಕುಸಿದ ಮಣ್ಣು: 4500 ಆಡಿ ಆಳದ ಬಿಜಿಎಂಎಲ್‌ ಸಿಂಕ್‌ ಪತ್ತೆ

Last Updated 5 ಏಪ್ರಿಲ್ 2020, 6:24 IST
ಅಕ್ಷರ ಗಾತ್ರ

ಕೆಜಿಎಫ್‌: ನಗರದ ಹೊರವಲಯದ ವಿರೂಪಾಕ್ಷಪುರ ಬಳಿ ರೈಲು ಹಳಿ ಮಾರ್ಗಕ್ಕಾಗಿ ಮಣ್ಣು ತೆರವುಗೊಳಿಸಿರುವ ಜಾಗದಲ್ಲಿ ಬಿಜಿಎಂಎಲ್‌ಗೆ ಸೇರಿದ ಸಿಂಕ್ ಪತ್ತೆಯಾಗಿದೆ. ಸಿಂಕ್‌ ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಮಾರಿಕುಪ್ಪಂ–ಕುಪ್ಪಂ ಹೊಸ ರೈಲು ಮಾರ್ಗದ ಕಾಮಗಾರಿಗಾಗಿ ವಿರೂಪಾಕ್ಷಪುರದ ಹೊಸಕೆರೆಯಲ್ಲಿ ಮಣ್ಣು ತೆರವುಗೊಳಿಸಲಾಗಿದೆ. ಸಾವಿರಾರು ಲೋಡ್‌ ಮಣ್ಣು ತೆಗೆಯಲಾಗಿದ್ದು, ಕೆರೆಯ ಆಳ ಸುಮಾರು 20 ಅಡಿಯಷ್ಟು ಹೆಚ್ಚಿದೆ. ರೈಲು ಮಾರ್ಗದ ವಿನ್ಯಾಸ ಬದಲಾಗಿದ್ದರಿಂದ ಕೆರೆಯಲ್ಲಿ ಮಣ್ಣು ತೆರವುಗೊಳಿಸುವುದನ್ನು ಐದಾರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ.

ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೆರೆಗೆ ಸ್ವಲ್ಪ ಪ್ರಮಾಣದ ನೀರು ಬಂದಿದೆ. ಕೆರೆಯ ಒಂದು ಪಾರ್ಶ್ವದಲ್ಲಿ ನೀರಿನಿಂದ ಭೂಮಿ ಕುಸಿದಿದೆ. ಈ ಜಾಗವು ಬಿಜಿಎಂಎಲ್‌ (ಚಿನ್ನದ ಗಣಿ) ಸಂಸ್ಥೆಗೆ ಸೇರಿದ ಶಾಫ್ಟ್‌ ಆಗಿದೆ. ಶಾಫ್ಟ್‌ನ ಮಣ್ಣು ಕುಸಿಯದಂತೆ ಚಾವಣಿ ನಿರ್ಮಿಸಲಾಗಿದ್ದು, ಶಾಫ್ಟ್‌ನ ಜಾಗ ವಿಶಾಲವಾಗಿದೆ. ಇದರಿಂದ ಒಳ ಹೋಗುವ ಮಾರ್ಗವು ಕತ್ತಲುಮಯವಾಗಿದೆ.

ಚಾವಣಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರೋಸ್‌ ಮರದ ತುಂಡುಗಳನ್ನು ಅಳವಡಿಸಲಾಗಿದೆ. ನೂರಾರು ವರ್ಷದ ಈ ಮರದ ತುಂಡುಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ರೋಸ್ ಮರದ ತುಂಡುಗಳು ಸಿಗುತ್ತಿದೆ ಎಂಬ ಸುದ್ದಿ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಕಳೆದೊಂದು ವಾರದಿಂದ ಸಿಂಕ್‌ ಪ್ರವೇಶಿಸಿ ರೋಸ್ ಮರದ ತುಂಡಗಳನ್ನು ಕದ್ದು ಸಾಗಿಸಿದ್ದಾರೆ. ಸಿಂಕ್‌ನಲ್ಲಿ ಬೆಲೆ ಬಾಳುವ ಮೋಟರ್‌ಗಳಿವೆ ಎಂದು ಮೂಲಗಳು ತಿಳಿಸಿವೆ.

ಯಾವುದೋ ಕಾಲದಲ್ಲಿ ಚಿನ್ನದ ಶೋಧನೆಗಾಗಿ ಈ ಭಾಗದಲ್ಲಿ ಇನ್‌ಕ್ಲೈನ್‌ ಶಾಫ್ಟ್ ತೆರೆಯಲಾಗಿತ್ತು. ಆದರೆ, ಚಿನ್ನದ ನಿಕ್ಷೇಪಗಳು ಸಿಗದ ಕಾರಣ, ಶಾಫ್ಟ್‌ಗಳನ್ನು ತಾಂತ್ರಿಕವಾಗಿ ಬಂದ್‌ ಮಾಡದೆ ಮೇಲ್ಮೈಗೆ ಮಣ್ಣು ಮುಚ್ಚಲಾಗಿತ್ತು. ಅದರ ಮೇಲೆ ಸುಮಾರು 20 ಅಡಿ ಮಣ್ಣು ತುಂಬಿದ್ದರಿಂದ ಯಾವುದೇ ಅಪಾಯ ಸಂಭವಿಸಿರಲಿಲ್ಲ.

ಪತ್ತೆಯಾದ ಸಿಂಕ್‌ನಲ್ಲಿದ್ದ ರೋಸ್‌ ಮರದ ತುಂಡುಗಳನ್ನು ಗ್ರಾಮಸ್ಥರು ಕಳವು ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ಬಿಜಿಎಂಎಲ್ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT