ಬರಿ ಪುಸ್ತಕ ಓದಿನಿಂದ ಜ್ಞಾನ ವೃದ್ಧಿಯಿಲ್ಲ: ಸಂದೀಪ್ ಶಾಸ್ತ್ರಿ ಅಭಿಪ್ರಾಯ

7

ಬರಿ ಪುಸ್ತಕ ಓದಿನಿಂದ ಜ್ಞಾನ ವೃದ್ಧಿಯಿಲ್ಲ: ಸಂದೀಪ್ ಶಾಸ್ತ್ರಿ ಅಭಿಪ್ರಾಯ

Published:
Updated:
Deccan Herald

ಕೋಲಾರ: ‘ವಿದ್ಯಾರ್ಥಿಗಳು ಪುಸ್ತಕದ ಓದಿಗೆ ಸೀಮಿತವಾದರೆ ಜ್ಞಾನ ವೃದ್ಧಿಯಾಗುವುದಿಲ್ಲ’ ಎಂದು ಜೈನ್ ವಿಶ್ವವಿದ್ಯಾಲಯದ (ಪ್ರಭಾರ) ಕುಲಪತಿ ಪ್ರೊ.ಸಂದೀಪ್ ಶಾಸ್ತ್ರಿ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕಳೆದು ಹೋದ ದಿನ, ಸಮಯ ಪುನಃ ಸಿಗುವುದಿಲ್ಲ. ಇಂದಿನ ವರ್ಷದಿಂದ ಮುಂದಿನ ವರ್ಷಕ್ಕೆ ನಾವು ಏನು ಅಭಿವೃದ್ಧಿಯಾಗಿದ್ದೇವೆ ಎಂಬುದು ಮುಖ್ಯ’ ಎಂದು ಹೇಳಿದರು.

‘ದೇಶ, ರಾಜಕೀಯ ಪಕ್ಷ ಹಾಗೂ ಸರ್ಕಾರದ ನಡುವೆ ಅಂತರವಿದ್ದಾಗ ಮಾತ್ರ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ. ದೇಶ, ಸರ್ಕಾರ, ನಾಯಕ, ಪಕ್ಷ ಇವುಗಳನ್ನು ಒಂದೇ ಮಾಡಿದರೆ ಪ್ರಜಾಪ್ರಭುತ್ವ ದಾರಿ ತಪ್ಪುವ ಅಪಾಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದರೂ ದೇಶ, ರಾಜ್ಯ ಬೇರೆ ಬೇರೆಯಾಗಿರುತ್ತದೆ. ಎಂದಿಗೂ ಪಕ್ಷ ಮತ್ತು ವ್ಯಕ್ತಿಗಳ ಅಳ್ವಿಕೆಯಿಂದ ದೇಶ ಸುಭದ್ರವಾಗಿರಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಗಾಂಧೀಜಿ ಆಶಯ: ‘ಈ ಹಿಂದೆ ಭಾರತದಿಂದ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಬೇಕೆಂದು ನೆಹರೂ ಸರ್ಕಾರ ತೀರ್ಮಾನ ಕೈಗೊಂಡಾಗ ಮೊದಲು ಪ್ರತಿಭಟನೆ ಮಾಡಿದ್ದು ಮಹಾತ್ಮ ಗಾಂಧೀಜಿ ಎಂದು ಲೋಹಿಯಾ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಇದು ಸತ್ಯ. ಉತ್ತಮ ದೇಶ ನಿರ್ಮಿಸಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಹೋರಾಟ ನಡೆಸಿದ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ತತ್ವಾದರ್ಶ ಎಲ್ಲಾ ಕಾಲಕ್ಕೂ ಪ್ರಸ್ತುತ’ ಎಂದರು.

ಕೊಡುಗೆ ನೀಡಿ: ‘ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಕಿವಿಮಾತು ಹೇಳಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿ.ವಿಯ ಸ್ನಾತಕೋತ್ತರ ಪದವಿ ವಿಭಾಗದಲ್ಲಿ 12 ಕೋರ್ಸ್‌ ಆರಂಭಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ದಾಖಲಾತಿಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಿ.ಡೊಮಿನಿಕ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಎಚ್.ಹೇಮಲತಾ, ಪ್ರಾಧ್ಯಾಪಕರಾದ ಎಂ.ದೀಕ್ಷಿತ್‌ಕುಮಾರ್, ಎಂ.ಡಿ.ಚೈತ್ರಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !